ಅವಮಾನದೊಂದಿಗೆ ಕಾಂಗ್ರೆಸ್ ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ: ರಾಜೀನಾಮೆಯ ಸೂಚನೆ ನೀಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್

Prasthutha|

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕರಿಂದ ಪದೇ ಪದೇ ಆಗುತ್ತಿರುವ ಅವಮಾನದಿಂದಾಗಿ ಇನ್ನು ಮುಂದೆ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ, ಅವರು ಸ್ಪಷ್ಟ ಸಂದೇಶ ರವಾನಿಸಿ ರಾಜೀನಾಮೆಯ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ ನಡೆಯಲಿರುವ ಶಾಸಕರ ಸಭೆಗೆ ಮುಂಚಿತವಾಗಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಹಲವು ಸಮಯದಿಂದ ಕ್ಯಾಪ್ಟನ್ ಅಮರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಆಂತರಿಕ ಕಚ್ಚಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಶಾಸಕರ ಸಭೆಯನ್ನು ಆಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಂದಿನ ವರ್ಷ ಪಂಜಾಬ್ ಅಸೆಂಬ್ಲಿಗೆ ನಡೆಯಲಿರುವ ಚುನಾವಣೆಯ ಹಿತದೃಷ್ಟಿಯಿಂದ ಇಂದಿನ ಸಭೆ ಮಹತ್ವ ಪಡೆದಿದೆ. ಮಾತ್ರವಲ್ಲ ಕ್ಯಾಪ್ಟನ್ ಕಾಂಗ್ರೆಸ್ ನಿಂದ ನಿರ್ಗಮಿಸುವ ಕುರಿತು ಈ ಸಭೆಯಲ್ಲಿ ನಿರ್ಣಯವಾಗಲಿದೆ.

- Advertisement -

ಕಳೆದ ಕೆಲವು ದಿನಗಳಿಂದ ಅಮರೀಂದ ಸಿಂಗ್ ಸಹಿತ ಹಲವಾರು ಶಾಸಕರು ಬಂಡಾಯದ ಬಾವುಟ ಹಾರಿಸುವ ಮೂಲಕ ಪಕ್ಷಕ್ಕೆ ಒತ್ತಡ ಹಾಕುತ್ತಿದ್ದರು. ಜುಲೈನಲ್ಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ತೀವ್ರ ಪ್ರತಿರೋಧದ ಹೊರತಾಗಿಯೂ ಪಕ್ಷ ಪಂಜಾಬ್ ಮುಖ್ಯಸ್ಥರಾಗಿ ನವಜೋತ್ ಸಿಧು ಅವರನ್ನು ನೇಮಿಸಿತ್ತು.

ಈ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಅಮರೀಂದರ್ ಸಿಂಗ್ ಅವರನ್ನು ಒತ್ತಾಯಿಸಿದ್ದು, ಇದನ್ನು ನಿರಾಕರಿಸಿರುವ ಅವರು ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.

- Advertisement -