ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನವು ದೀರ್ಘ ಕಾಲದವರೆಗೆ ಮುಂದುವರೆಯುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದಾರೆ.
ಕಳೆದ ವರ್ಷ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವು ಏಳನೆ ತಿಂಗಳಿಗೆ ಕಾಲಿಟ್ಟಿದೆ. ಆಂದೋಲನ ನಿರತ ರೈತರು ತಮ್ಮ ಹೋರಾಟಕ್ಕೆ ಆರು ತಿಂಗಳು ತುಂಬಿರುವ ಹಿನ್ನಲೆಯಲ್ಲಿ ಬುಧವಾರದಂದು ಕರಾಳ ದಿನವನ್ನು ಆಚರಿಸಲು ದೇಶಕ್ಕೆ ಕರೆ ನೀಡಿದ್ದರು. ಅದರಂತೆ ದೇಶದಾದ್ಯಂತ ಭಾರಿ ಬೆಂಬಲ ಕೂಡಾ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರವು ಕೃಷಿ ಕಾನೂನನ್ನು ವಾಪಾಸು ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಈ ಮೂಲಕ ತಿಳಿಸಿದ್ದರು.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ರಾಕೇಶ್ ಟಿಕಾಯತ್, “ಆಂದೋಲನವು ದೀರ್ಘಕಾಲದವರೆಗೆ ಮುಂದುವರಿಯುತ್ತದೆ. ಕೊರೊನಾ ಕಾಲದಲ್ಲಿ ಕಾನೂನುಗಳನ್ನು ಮಾಡಬಹುದಾದರೆ, ಅದನ್ನು ಯಾಕೆ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಇದೀಗ ಕೊರೊನಾ ಎರಡನೆ ಅಲೆಯು ದೇಶದಾದ್ಯಂತ ಹರಡುತ್ತಿದ್ದು, ರೈತ ಹೋರಾಟದಿಂದ ಕೊರೊನಾ ಇನ್ನಷ್ಟು ಹರಡುತ್ತದೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ರೈತರು ಸರ್ಕಾರದೊಂದಿಗೆ ಸಹಕರಿಸಬೇಕು ಎಂಬ ವಾದವನ್ನು ಕೂಡಾ ಹರಿಬಿಡಲಾಗುತ್ತಿದೆ. ಇದಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ತೀಕ್ಣವಾಗಿ ಪ್ರತಿಕ್ರಿಯಿಸಿದ್ದಾರೆ.