ಶಿಕ್ಷಣವಾದಿ ಡಾ.ಮುಮ್ತಾಝ್ ಅಹ್ಮದ್ ಖಾನ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Prasthutha|

ಶಿಕ್ಷಣವಾದಿ, ಸಮಾಜ ಸುಧಾರಕ ಡಾ.ಮುಮ್ತಾಝ್ ಅಹ್ಮದ್ ಖಾನ್ ಅವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರ ಸಂತಾಪ ಸೂಚಿಸಿದ್ದಾರೆ.

- Advertisement -

ಎಂಬಿಬಿಎಸ್ ಪದವೀಧರರಾಗಿದ್ದ ಮುಮ್ತಾಝ್ ಅಹ್ಮದ್ ಖಾನ್ ಅವರು, ಅಲ್ ಅಮೀನ್ ಎಜುಕೇಷನ್ ಸೊಸೈಟಿ ಸ್ಥಾಪನೆಯ ರೂವಾರಿಯಾಗಿದ್ದರು. ತಮ್ಮ 31ನೇ ಪ್ರಾಯದಲ್ಲಿ ಅಲ್-ಅಮೀನ್ ಸಂಸ್ಥೆಯನ್ನು ಅವರು ಹುಟ್ಟು ಹಾಕಿದ್ದು, ಇದೀಗ ಇದರ ಅಧೀನದಲ್ಲಿ ಕರ್ನಾಟಕ ಸಹಿತ ದೇಶಾದ್ಯಂತ 250ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ ಅನ್ನುವುದು ಗಮನಾರ್ಹವಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಮುಮ್ತಾಝ್ ಅಹ್ಮದ್ ಖಾನ್ ಅವರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದ ಅಸಂಖ್ಯಾತ ಪ್ರತಿಭೆಗಳನ್ನು ಸಮಾಜಕ್ಕೆ  ಅರ್ಪಿಸಿದ್ದಾರೆ.  ಸಲಾರ್ ಡೈಲಿ ದೈನಿಕದ ಸ್ಥಾಪಕ ಟ್ರಸ್ಟಿಯಾಗಿದ್ದ ಅವರು ಅಲಿಘರ್ ಮುಸ್ಲಿಮ್ ಯುನಿವರ್ಸಿಟಿಯ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣಕ್ಕೆ ಕ್ಷೇತ್ರಕ್ಕೆ ಅಗಣಿತ ಸೇವೆ ನೀಡಿದ ಮಾನವತಾವಾದಿ ಮುಮ್ತಾಝ್ ಅಹ್ಮದ್ ಖಾನ್ ಅವರು ಅಳಿಸಲಾಗದ ಹೆಜ್ಜೆಗುರುತನ್ನು ಮೂಡಿಸಿ ನಿರ್ಗಮಿಸಿದ್ದಾರೆ. ಇಂತಹ ಅಪ್ರತಿಮ ಸಾಧಕನ ಅಗಲುವಿಕೆ ಸಮಾಜಕ್ಕೊಂದು ತುಂಬಲಾರದ ನಷ್ಟವಾಗಿದೆ. ದೇಶಕ್ಕೆ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಸಬಲೀಕರಣಕ್ಕಾಗಿ ಅವರು ನೀಡಿದ ಅಗ್ರಗಣ್ಯ ಸೇವೆಯನ್ನು ಪಾಪ್ಯುಲರ್ ಫ್ರಂಟ್ ಸ್ಮರಿಸುತ್ತದೆ ಮತ್ತು ಅವರು ಕುಟುಂಬ ವರ್ಗಕ್ಕೆ ಮತ್ತು ಹಿತೈಷಿಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ.

- Advertisement -

Join Whatsapp