ಸೆಪ್ಟಂಬರ್ 13-24ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ: ಸಂಪುಟ ಅನುಮೋದನೆ

Prasthutha|

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಸಪ್ಟೆಂಬರ್ 13 ರಿಂದ 24 ರವರೆಗೆ ನಡೆಸಲು ರಾಜ್ಯ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಸೆಪ್ಟಂಬರ್ 13ರಿಂದ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.

- Advertisement -


ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮಗಳು-2021ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. 2021-22ನೇ ಸಾಲಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಹದಿಹರೆಯದ ಹೆಣ್ಣು ಮಕ್ಕಳಿಗೆ “ಶುಚಿ” ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ ಕಿನ್ ಪ್ಯಾಡ್ ಗಳನ್ನು 47 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.


ರಾಜ್ಯದಲ್ಲಿನ 2859 ಆರೋಗ್ಯ ಉಪ ಕೇಂದ್ರಗಳನ್ನು “ಆರೋಗ್ಯ ಮತ್ತು ಕ್ಷೇಮ ಕೇಂದ್ರ”ಗಳನ್ನಾಗಿ 478.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇಕಡಾ 50ರಷ್ಟು ಅನುದಾನ ನೀಡಲಿದೆ. ರಾಜ್ಯ ಸರ್ಕಾರ ತನ್ನ ಪಾಲು 278 ಕೋಟಿ ರೂ. ನೀಡಲಿದೆ ಎಂದು ಸಚಿವರು ತಿಳಿಸಿದರು. 2859 ಠರೋಗ್ಯ ಉಪ.ಕೇಂದ್ರಗಳನ್ನು ಮೇಲ್ದರ್ಜೆಗೆ 478 ಕೋಟಿ ಅನುಮೋದನೆ. ಶೇ 50% ರಷ್ಟು ಕೇಂದ್ರ ಸರ್ಕಾರ ನೀಡಲಿದೆ. 278.ಕೋಟಿ ರಾಜ್ಯ ಸರ್ಕಾರ ನೀಡಲಿದೆ.

- Advertisement -


ಕಾನೂನು ಅಧಿಕಾರಿ (ಕಿರಿಯ) ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕಾನೂನು ಅಧಿಕಾರಿ ಎಂ.ಎಲ್.ಶೈಲಜಾ ಅವರು ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸೇವೆಯಿಂದ ವಜಾಗೊಳಿಸುವ ಮತ್ತು ದಂಡನೆ ವಿಧಿಸಲು ಅನುಮೋದನೆ ನೀಡಲಾಗಿದೆ. ನಿವೃತ್ತ ಮೀಸಲು ಪೊಲೀಸ್ ಸಹಾಯಕ ಉಪ ನಿರೀಕ್ಷಕ ಕೆ.ಸುಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಿಸಲು ಅನುಮತಿ ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.


ಕಲಬುರಗಿ ಜಿಲ್ಲೆ ಆಳಂದ ತಾಲೂಕು ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯ 12.48 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಬೆಂಗಳೂರಿನ ಮಾತಾ ಅಮೃತಾನಂದಮಯಿ ಮಠ ಅವರಿಗೆ ಮಂಜೂರು ಮಾಡಿರುವ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ, ಕಸವನಹಳ್ಳೀ ಗ್ರಾಮದ ಸರ್ವೆ ನಂಬರ್ 26 ಮತ್ತು 27ರಲ್ಲಿ ಒಟ್ಟು 22-23 ಎಕರೆ ಜಮೀನಿನ ಉಪಯೋಗದ ಉದ್ದೇಶಗಳನ್ನು ಮಾರ್ಪಡಿಸಿರುವ ಸರ್ಕಾರಿ ಆದೇಶವನ್ನು ಮರು ಪರಿಶೀಲಿಸಲು ತೀರ್ಮಾನಕೈಗೊಳ್ಳಲಾಗಿದೆ ಎಂದರು.


ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ವಾತಂತ್ರ್ಯ ದಿನದಂದು ಮಾಡಿರುವ ಎಲ್ಲಾ ನೂತನ ಯೋಜನೆಗಳ ಜಾರಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದ ಜೆ.ಸಿ.ಮಾಧುಸ್ವಾಮಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆಗೆ ಆನಂದ್ ಸಿಂಗ್, ಶ್ರೀರಾಮುಲ್ ಗೈರು:

ಸಚಿವ ಸಂಪುಟ ಸಭೆಗೆ ಸಚಿವರಾದ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಗೈರಾಗಿದ್ದರು. ಖಾತೆ ಅತೃಪ್ತಿಹೊಂದಿರುವ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕಾರ‌ ಮಾಡಿಲ್ಲ. ಇತ್ತ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿವ ಶ್ರೀರಾಮುಲು ಅವರಿಗೂ ಅಸಮಾಧಾನ ಇತ್ತು. ಇದೀಗ ಸಚಿವ ಸಂಪುಟ ಸಭೆಗೆ ಗೈರಾಗುವ ಮೂಲಕ ತಮಗೆ ಇನ್ನೂ ಅಸಮಾಧಾನವಿದೆ ಎಂಬ ಸೂಚನೆ ನೀಡಿದ್ದಾರೆ.

Join Whatsapp