ಸಿಎಎ ವಿರೋಧಿ ಭಾಷಣ ಪ್ರಕರಣ | ಡಾ. ಕಫೀಲ್ ಖಾನ್ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Prasthutha|

ಲಕ್ನೋ : ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಅಲೀಗಢ ಮುಸ್ಲಿಂ ವಿವಿ ಆವರಣದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಡಾ.ಕಫೀಲ್ ಖಾನ್ ಮಾಡಿದ್ದ ಭಾಷಣದ ವಿರುದ್ಧದ ಅಪರಾಧ ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ.

- Advertisement -

ನ್ಯಾಯಮೂರ್ತಿ ಗೌತಮ್ ಚೌಧರಿ ಅವರ ನೇತೃತ್ವದ ಪೀಠ, ಡಾ.ಖಾನ್ ವಿರುದ್ಧದ ಅಪರಾಧ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಮಥುರಾದ ಜೆಎಂಎಫ್‌ಸಿ ನ್ಯಾಯಾಲಯ ಕಫೀಲ್ ಖಾನ್ ವಿರುದ್ಧ, ಪ್ರಚೋದನಕಾರಿ ಭಾಷಣದ ಆರೋಪದಲ್ಲಿ ಅಪರಾಧ ಪ್ರಕ್ರಿಯೆ ಆರಂಭಿಸಲು ಆದೇಶ ನೀಡಿತ್ತು. ಇದರಿಂದಾಗಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿ, ಕಫೀಲ್ ಖಾನ್ ಮಥುರಾ ಜೈಲಿನಲ್ಲಿ ಏಳೂವರೆ ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು.

ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿತ್ತು. ಆದಾಗ್ಯೂ ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್, ಖಾನ್ ಅವರನ್ನು ಎನ್‌ಎಸ್‌ಎ ಕಾಯ್ದೆಯಡಿ ಜೈಲಿಗೆ ಕಳುಹಿಸದಂತೆ ಸೂಚನೆ ನೀಡಿತ್ತು. ಡಾ.ಖಾನ್ ಮಾಡಿರುವ ಭಾಷಣ ದೇಶದ ಏಕತೆಗೆ ಸಂಬಂಧಿಸಿದ ಕರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಖಾನ್ ಇದು ಭಾರತದ ಜನತೆಗೆ ಸಂದ ದೊಡ್ಡ ಜಯ. ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.



Join Whatsapp