ಸೆ. 30 ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಆರಂಭ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ‘ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಈಗಾಗಲೇ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದಾರೆ.

- Advertisement -

ರಾಜ್ಯ ಯಾತ್ರೆ ಸಂದರ್ಭದಲ್ಲಿ ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು. ರಾಜ್ಯದ ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದೇವೆ. ಕೆಲವರು 1 ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ನಾವು ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲು ಆನ್ ಲೈನ್ ನೋಂದಣಿ ಆರಂಭಿಸುತ್ತಿದ್ದೇವೆ. ಈ ಯಾತ್ರಿಗಳಿಗೆ ವಾಸ್ತವ್ಯ, ಆಹಾರ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ.

ಪ್ರದೇಶ ಯಾತ್ರಿಗಳ ಜತೆಗೆ ಸ್ವಯಂ ಇಚ್ಛೆ ಯಾತ್ರಿಗಳು ಹಾಗೂ ಡಿಜಿಟಲ್ ಯಾತ್ರಿಗಳಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದೇವೆ. ಹೀಗಾಗಿ ಇಂದು ಈ ಯಾತ್ರೆಗೆ ಸಂಬಂಧಿಸಿದ ಜಾಲತಾಣ ಉದ್ಘಾಟಿಸುತ್ತಿದ್ದೇವೆ ಎಂದು ಹೇಳಿದರು.

- Advertisement -

ರಾಜ್ಯದಲ್ಲಿ ಎಲ್ಲ ವರ್ಗಗಳ ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ ನಮ್ಮ ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವುದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಉತ್ತಮ ಆಡಳಿತಕ್ಕೆ, ದೇಶ ಹಾಗೂ ರಾಜ್ಯದ ರೈತರು, ಕಾರ್ಮಿಕರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಕರ್ನಾಟಕದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಮಧ್ಯಾಹ್ನ ಬಿಡುವಿನ ವೇಳೆ ನಿರುದ್ಯೋಗಿ ಯುವಕರಿಗೆ ರಾಹುಲ್ ಗಾಂಧಿ ಅವರ ಜತೆ ಸಂವಾದ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇವರ ಜತೆಗೆ ಮಹಿಳೆಯರು, ಕಾರ್ಮಿಕರು, ಸಂಘ ಸಂಸ್ಥೆಗಳು, ಎರಡು ಕಡೆ ರೈತರು, ಪರಿಶಿಷ್ಟರು, ನಾಗರೀಕ ಸಮಾಜದವರು, ಅಲ್ಪಸಂಖ್ಯಾತರು, ಶ್ರಮಿಕರಿಗೂ ಸಂವಾದಕ್ಕೆ ಒಂದೊಂದು ದಿನ ಅವಕಾಶ ಕಲ್ಪಿಸುತ್ತೇವೆ.

ರಾಹುಲ್ ಗಾಂಧಿ ಅವರು ಮೊದಲ ಬಾರಿ ರಾಜ್ಯಕ್ಕೆ ಬಂದಾಗ ಬಿಳಿಗಿರಿರಂಗನ ಬೆಟ್ಟದಲ್ಲಿ ಬುಡಕಟ್ಟು ಜನರನ್ನು ಭೇಟಿ ಮಾಡಿದ್ದರು. ಅಲ್ಲಿನ ಜನರ ಸಮಸ್ಯೆ ತಿಳಿದು ಫಾರೆಸ್ಟ್ ಸೆಟ್ಲಮೆಂಟ್ ಕಾಯ್ದೆ ತಂದರು. ಹೀಗಾಗಿ 21 ದಿನಗಳ ಕಾಲ ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಒಂದೊಂದು ವರ್ಗದವರಿಗೆ ಭೇಟಿ ಅವಕಾಶ ಮಾಡಿಕೊಡುತ್ತೇವೆ ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು 76 ಸಾವಿರ ಜನ ಇದ್ದರು. ಹೀಗಾಗಿ ಯುವಕರಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲು ನೋಂದಣಿ ಆರಂಭಿಸಿದ್ದೇವೆ. ನೀವು ಕೂಡ ನೋಂದಣಿ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿ ಎಂದು ಅವರು ಮನವಿ ಮಾಡಿದರು.

ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಲು ವಿಶೇಷ ಸಮಿತಿ ರಚನೆ:
ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕೃಷ್ಣ ಭೈರೇಗೌಡ, ಪದ್ಮಾವತಿ ಅವರು ಸೇರಿದಂತೆ ನಗರದ ಪ್ರಮುಖ ನಾಯಕರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಈ ಸಮಿತಿ 15 ದಿನಗಳ ಒಳಗೆ ಬೆಂಗಳೂರು ನಾಗರೀಕರಿಂದ ಆನ್ ಲೈನ್ ಮೂಲಕ ಅಭಿಪ್ರಾಯ ಸಂಗ್ರಹಿಸಲಿದೆ.

ಬೆಂಗಳೂರಿನ ಜನರ ಧ್ವನಿ ಕಾಂಗ್ರೆಸ್ ಧ್ವನಿಯಾಗಬೇಕು ಎಂದು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸರ್ವಪಕ್ಷ ಪರಿಹಾರ ಸಮಿತಿ ರಚನೆಯಾಗಬೇಕು. ಇದರಲ್ಲಿ ನಾಗರೀಕ ಸಮಾಜದ ಪ್ರತಿನಿಧಿಗಳು ಇರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ಹಾನಿಯಾಗಿದ್ದರೆ ಅವರಿಗೆ 5 ಲಕ್ಷದಿಂದ 125 ಲಕ್ಷದವರೆಗೂ ಪರಿಹಾರ ನೀಡಬೇಕು. ಪ್ರವಾಹದಿಂದ ಜನ ಪೀಠೋಪಕರಣದಿಂದ ಹಿಡಿದು ಬಟ್ಟೆ, ವಾಹನ ಎಲ್ಲವನ್ನೂ ಕಳೆದುಕೊಂಡಿದ್ದು, ಇವರಿಗೆ ಸೂಕ್ತ ಪರಿಹಾರ ನೀಡಬೇಕು.

ಸರ್ಕಾರ ಕೂಡಲೇ ಆರೋಗ್ಯ ಶಿಬಿರ ಆಯೋಜಿಸಬೇಕು. ಜತೆಗೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಕೂಡಲೇ ಈ ಆಗ್ರಹಗಳನ್ನು ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಮಳೆ ಅನಾಹುತದ ಹಿಂದೆ ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಿತೂರಿ ಇದೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವು ನಿಮ್ಮ ಕ್ಯಾಮೇರಾಗಳಲ್ಲಿ ಏನೆಲ್ಲಾ ತೋರಿಸಿದ್ದೀರೋ ಅವುಗಳೇ ಸತ್ಯ. ಬ್ರ್ಯಾಂಡ್ ಬೆಂಗಳೂರು ಎಂಬುದನ್ನು ನಾನು ಮಾಡಿಲ್ಲ. ಈಗ ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ, ಮೋಹನ್ ದಾಸ್ ಪೈ, ಕಿರಣ್ ಮಜೂಮ್ದಾರ್ ಹಾಗೂ ದೇಶಕ್ಕೆ ಶೇ. 39 ರಷ್ಟು ಐಟಿ ತೆರಿಗೆ ಪಾವತಿಸಿರುತ್ತಿರುವ ಉದ್ಯಮಿಗಳು ಮಾಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಾಗ ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಾರೆ ಎಂದು ಹೊಗಳಿದ್ದರು. ಇದನ್ನು ನಾವು ಹೇಳಿಲ್ಲ, ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ. ಈಗ ಆ ಘನತೆ ಕುಸಿಯುತ್ತಿದೆ. ನಾವು ಬೆಂಗಳೂರಿನ ಘನತೆ ಹೆಚ್ಚಿಸುವ ಪರವಾಗಿದ್ದೇವೆಯೇ ಹೊರತು, ಅದನ್ನು ಹಾಳುಮಾಡಲು ಅಲ್ಲ.

ಈಗ ಸದ್ಯಕ್ಕೆ ಬೆಂಗಳೂರಿನ ಎಲ್ಲ ವರ್ಗದ ಜನರ ಧ್ವನಿ ಆಲಿಸಲು ಸಮಿತಿ ರಚಿಸಿದ್ದು, ನಾವು ನಮ್ಮ ನಗರವನ್ನು ರಕ್ಷಿಸುವ ಬಗ್ಗೆ ಗಮನ ಹರಿಸುತ್ತಿದ್ದೇವೆ’ ಎಂದು ಹೇಳಿದರು.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರವಾಹ ಸಮಯದಲ್ಲಿ ಬಂದು ಸಂಚಾರಿ ದಟ್ಟಣೆ ವಿಚಾರವಾಗಿ ಮಾತನಾಡಿರುವ ಬಗ್ಗೆ ಕೇಳಿದಾಗ, ‘ಪ್ರಧಾನ ಮಂತ್ರಿಗಳು ಬಂದು ಉಪನಗರ ರೈಲು ವಿಚಾರವಾಗಿ ಗಡುವು ನೀಡಿ ಹೋದರು. ಇದಕ್ಕಾಗಿ ಅವರು ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಈ ಯೋಜನೆ ಕಾಮಗಾರಿ ಆರಂಭವಾಗಿದೆಯೇ? ಖಾಲಿ ಪಾತ್ರೆಗಳು ಹೆಚ್ಚು ಶಬ್ಧ ಮಾಡುವಂತೆ ಅವರು ಕೇವಲ ಘೋಷಣೆಗಳನ್ನು ಮಾತ್ರ ಮಾಡುತ್ತಾರೆ’ ಎಂದು ಹರಿಹಾಯ್ದರು.



Join Whatsapp