ಗೋಗ್ರಾ ಪ್ರದೇಶದ ಗಡಿರೇಖೆಯಿಂದ ಭಾರತ, ಚೀನಾ ಪೂರ್ಣ ಹಿಂದಕ್ಕೆ

Prasthutha|

ನವದೆಹಲಿ: ಪೂರ್ವ ಲಡಾಕ್ ನ ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಸುತ್ತ ಸೆಪ್ಟೆಂಬರ್ 12ರೊಳಗೆ ಚೀನಾ ಮತ್ತು ಭಾರತದ ಎಲ್ಲ ಸೇನಾಪಡೆಗಳು ಗಡಿ ಗೆರೆಯಿಂದ ಹಿಂದೆ ಸರಿಯಲಿವೆ ಎಂದು ಶುಕ್ರವಾರ ಎಂಇಎ- ವಿದೇಶಾಂಗ ಸಚಿವಾಲಯವು ಹೇಳಿದೆ.

- Advertisement -

2022ರ ಜು. 17ರಂದು ಚುಸುಲ್ ಮೋಲ್ಡೋದಲ್ಲಿ ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಗಳು ಹದಿನಾರನೆಯ ಸುತ್ತಿನ ಮಾತುಕತೆ ನಡೆಸಿದ್ದರು. ಅಂದಿನಿಂದ ಎರಡೂ ಕಡೆಯ ಸೇನೆಯವರು ಭಾರತ ಚೀನಾ ಗಡಿಯ ಪಶ್ಚಿಮ ಭಾಗದಲ್ಲಿ ಪರಸ್ಪರ ಸಂಪರ್ಕಿಸುತ್ತ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದವು. ಅಂತಿಮವಾಗಿ ಈ ನಿರ್ಣಯಕ್ಕೆ ಬಂದಿವೆ.

“ಅದರ ಫಲಿತವಾಗಿ ಗೋಗ್ರಾ ಬಿಸಿಚಿಲುಮೆ ಪ್ರದೇಶದಲ್ಲಿ ಭಾರತ ಚೀನಾ ಎರಡೂ ಗಡಿ ಗೆರೆಯಿಂದ ಹಿಂದಕ್ಕೆ ಸರಿದು ನಿಲ್ಲಲು ಗಟ್ಟಿ ನಿರ್ಧಾರಕ್ಕೆ ಬಂದವು. ಈ ಬಾರಿ ಸೆಪ್ಟೆಂಬರ್ 12ರ ಬಳಿಕ ಆ ಸಮಸ್ಯೆ ಇರುವುದಿಲ್ಲ. ಎರಡೂ ಕಡೆಯವರು ಶಾಂತಿಯುತವಾಗಿ ನಿಶ್ಚಿತ ಹಿಂಬದಿಯ ಬ್ಯಾರಕ್ ಗೆ ಹೋಗಿ ಸೇರಿಕೊಳ್ಳಲು ಒಪ್ಪಿಕೊಳ್ಳಲಾಗಿದೆ. ಗೌರವಯುತವಾಗಿ ಎರಡೂ ಪಡೆಗಳು ತಮ್ಮ ಗೌರವಯುತ ನೆಲೆಗಳಿಗೆ ಹಿಂದಿರುಗಲು ತೀರ್ಮಾನಿಸಿವೆ” ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

- Advertisement -

ಗೋಗ್ರಾ ಹಾಟ್ ಸ್ಪ್ರಿಂಗ್ಸ್ ಗಸ್ತು ಪಾಯಿಂಟ್ 15ರಿಂದ ನಾವು ಹಿಂದಕ್ಕೆ ಹೊರಟಿರುವುದಾಗಿ ಭಾರತ ಮತ್ತು ಚೀನಾ ಸೇನಾ ಪಡೆಯವರು ಘೋಷಿಸಿದ ಮರುದಿನ ವಿದೇಶಾಂಗ ಸಚಿವಾಲಯವು ಈ ಹೇಳಿಕೆ ಹೊರಡಿಸಿದೆ. ಗಡಿರೇಖೆಯುದ್ದಕ್ಕೂ ಶಾಂತಿ ಕಾಪಾಡಲು ಮತ್ತು ಮುಂದೆ ಬರಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಎರಡೂ ಪಡೆಗಳು ನಿರಂತರ ಸಂಪರ್ಕ ಮತ್ತು ಮಾತುಕತೆಗಳಲ್ಲಿ ತೊಡಗಿರಲು ಒಪ್ಪಿವೆ ಎಂದು ಸಹ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

“ಎರಡೂ ಕಡೆ ತಾತ್ಕಾಲಿಕವಾಗಿ ನಿರ್ಮಿಸಿದ ಎಲ್ಲ ಸಂರಚನೆಗಳನ್ನು ಕೂಡಲೆ ತೆಗೆದುಹಾಕಲು ಹಾಗೂ ಪರಸ್ಪರ ಸೇನೆಗಳು ಅವನ್ನು ಪರಿಶೀಲಿಸಿಕೊಳ್ಳಲು ಒಪ್ಪಲಾಗಿದೆ. ಅಲ್ಲಿ ಹಿಂದೆ ಯಾವ ರೀತಿಯಲ್ಲಿ ಭೂರಚನೆ ಇತ್ತೋ ಅದನ್ನು ಕಾಯ್ದುಕೊಳ್ಳಲು ಎರಡೂ ಕಡೆಯವರು ಬದ್ಧರಾಗಿದ್ದಾರೆ. ಅದು ನಿರಂತರ ಗಮನಿಸಲ್ಪಡುತ್ತದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಗ್ಚಿ ಹೇಳಿಕೆ ನೀಡಿದ್ದಾರೆ.

ಈ ಪ್ರದೇಶದಲ್ಲಿ ಗಡಿ ಗೆರೆಯು ಎರಡೂ ಕಡೆಯವರ ಕಣ್ಗಾವಲಿನಲ್ಲಿ ಇರುತ್ತದೆ ಮತ್ತು ಯಾವುದೇ ಬಗೆಯ ಅತಿಕ್ರಮಣಕ್ಕೆ ಅವಕಾಶ ಇರುವುದಿಲ್ಲ ಎಂದು ಎರಡೂ ಕಡೆ ಮಾತಾಡಿ ಒಪ್ಪಿಕೊಳ್ಳಲಾಗಿದೆ ಎಂದೂ ವಿದೇಶಾಂಗ ಸಚಿವಾಲಯದ ಹೇಳಿಕೆ ಇಂದು ಹೊರಬಿದ್ದಿದೆ.

Join Whatsapp