ಬಾಲಿ: ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು BWF ವರ್ಲ್ಡ್ ಟೂರ್, ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ BWF ವರ್ಲ್ಡ್ ಟೂರ್-2021ನ ಫೈನಲ್ ಪಂದ್ಯದಲ್ಲಿ ಸಿಂಧು, ದಕ್ಷಿಣ ಕೊರಿಯಾದ ಆನ್ ಸೆಯೊಂಗ್ ವಿರುದ್ಧ 21-16, 21-12 ಅಂತರದಲ್ಲಿ ನೇರ ಸೆಟ್ಗಳಿಂದ ಸೋತು ನಿರಾಸೆ ಅನುಭವಿಸಿದರು. ಆ ಮೂಲಕ ಟೂರ್ನಿಯ 3ನೇ ಬಾರಿಯ ಫೈನಲ್ ಫೈಟ್’ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 2018ರ BWF ವರ್ಲ್ಡ್ ಟೂರ್ ಫೈನಲ್’ನಲ್ಲಿ ಚಾಂಪಿಯನ್ ಆಗಿದ್ದ ಸಿಂಧು, ಈ ಸಾಧನೆಗೈದ ಮೊದಲ ಭಾರತೀಯ ಶಟ್ಲರ್ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಪ್ರಚಂಡ ಫಾರ್ಮ್’ನಲ್ಲಿರುವ ಆನ್ ಸೆಯೊಂಗ್, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡೋನೇಷ್ಯಾ ಮಾಸ್ಟರ್ಸ್ ಮತ್ತು ಇಂಡೋನೇಷ್ಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಕಳೆದ ಅಕ್ಟೋಬರ್ನಲ್ಲಿ ನಡೆದ ಡೆನ್ಮಾರ್ಕ್ ಓಪನ್ನ ಕ್ವಾರ್ಟರ್ ಫೈನಲ್ನಲ್ಲಿ ಸಿಂಧು- ಸೆಯೊಂಗ್ ಮುಖಾಮುಖಿಯಾದಗಲೂ ಸೆಯೊಂಗ್ ಗೆಲುವಿನ ನಗೆ ಬೀರಿದ್ದರು.
ಆಗಸ್ಟ್’ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್’ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಪಿವಿ ಸಿಂಧು, ಆ ಬಳಿಕ ನಡೆದ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಕಳೆದ ವಾರ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್’ನಲ್ಲಿ ಸಿಂಧು, ಅಗ್ರಶ್ರೇಯಾಂಕಿತ ಆಟಗಾರ್ತಿ ಜಪಾನಿನ ಅಕಾನೆ ಯಮಾಗುಚಿ ವಿರುದ್ಧ 21-13, 21-9 ಅಂತರದಲ್ಲಿ ಪೈಪೋಟಿ ನೀಡದೆ ಶರಣಾಗಿದ್ದರು. ಈ ಪಂದ್ಯವು ಕೇವಲ 32 ನಿಮಿಷದಲ್ಲಿ ಅಂತ್ಯ ಕಂಡಿತ್ತು.