“ಪೊಲೀಸರು ಹಿಂದೆಯೇ ಕ್ರಮ ಕೈಗೊಂಡಿದ್ದರೆ ನನ್ನ ಮಗಳು ಸಾಯುತ್ತಿರಲಿಲ್ಲ”

Prasthutha|

ಬುಲಂದ್ ಶಹರ್: ಇಲ್ಲಿನ ಸಿಧ್ ನಗ್ಲಾ ಗ್ರಾಮದಲ್ಲಿ ನವೆಂಬರ್ 17ರಂದು ಓರ್ವ ಅಪ್ರಾಪ್ತ ದಲಿತ ಹುಡುಗಿಯನ್ನು ಹಾಡುಹಗಲೇ ಜೀವಂತ ದಹಿಸಲಾಯಿತು. ಆಗಸ್ಟ್ ತಿಂಗಳಲ್ಲಿ ಸಂತ್ರಸ್ತೆಯ ಮೇಲೆ ಹರೀಶ್ ಯಾನೆ ಚೈಂಟಾ ಎಂಬಾತ ಅತ್ಯಾಚಾರವೆಸಗಿದ್ದ ಮತ್ತು ಆತನ ಸಹಚರರು ದೂರು ಹಿಂದೆಗೆಯುವಂತೆ ಆಕೆಗೆ ಕಿರುಕುಳ ನೀಡುತ್ತಿದ್ದರು.

ಸಂತ್ರಸ್ತೆ ಸುತ್ತಲಿನ ಕಬ್ಬಿನ ಗದ್ದೆಗಳಲ್ಲಿ ಕೃಷಿ ಕೆಲಸ ಮಾಡುತ್ತಾ ತನ್ನ ಕುಟುಂಬವನ್ನು ನೆರವಾಗುತ್ತಿದ್ದಳು. ಆಗಸ್ಟ್ 14ರಂದು ಸಿಧ್ ನಗ್ಲಾದ ಸಮೀಪದ ಧಮ್ನಿ ಗ್ರಾಮದ ಕಾಜಲ್ ಎಂಬವರಿಗೆ ಸೇರಿದ ಕಬ್ಬು ಕಾರ್ಖಾನೆಯಿಂದ ಯಂತ್ರವೊಂದರ ಆಪರೇಟ್ ಮಾಡುವ ಕುರಿತಂತೆ ವಾಗ್ವಾದವುಂಟಾಗಿ ಆಕೆಯನ್ನು ಅಪಹರಿಸಲಾಗಿತ್ತು. 24 ಗಂಟೆಗಳ ಬಳಿಕ ಸಮೀಪದ ತೋಟವೊಂದರಲ್ಲಿ ಅರೆಪ್ರಜ್ನಾವಸ್ಥೆಯಲ್ಲಿ ಆಕೆಯನ್ನು ಆಕೆಯ ತಂದೆ ಪತ್ತೆ ಮಾಡಿದ್ದರು. ಆಕೆಯ ಪ್ರಕಾರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹರೀಶ್ ಎಂಬಾತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

- Advertisement -

ಜಹಾಂಗೀರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಆಗಸ್ಟ್ 15ರಂದು ಹರೀಶ್ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸಹ ಆರೋಪಿಗಳಾದ ಹರೀಶ್ ನ ಸಂಬಂಧಿಕರಾದ ಸಂಜಯ್ ಮತ್ತು ಆತನ ಪತ್ನಿಯ ಬಂಧನವನ್ನು ಪೊಲೀಸರು ತಡೆದರು.

ಆಗಸ್ಟ್ ತಿಂಗಳಿಂದಲೇ ಸಂತ್ರಸ್ತೆಯ ಗ್ರಾಮದ ಆರೋಪಿಗಳ ಸಹಚರರು ದೂರು ಹಿಂದೆಗೆಯುವಂತೆ ಬೆದರಿಕೆಗಳನ್ನು ಹಾಕುತ್ತಿದ್ದರು. “ಒಂದೋ ದೂರು ಹಿಂದೆಗೆಯಬೇಕು ಮತ್ತು ಹೇಳಿಕೆಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ ನಾವು ನಿನ್ನನ್ನು ಕೊಲ್ಲುತ್ತೇವೆ” ಎಂದು ಸಂತ್ರಸ್ತೆಗೆ ಅವರು ಬೆದರಿಕೆ ಹಾಕಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

ಸಂತ್ರಸೆಯು ಹೆಚ್ಚು ಮಾತನಾಡುವ ಹುಡುಗಿಯಾಗಿದ್ದಳು. ಬೆದರಿಕೆಗಳು ಹೆಚ್ಚಿದಂತೆ ಆಕೆ ಮೌನವಾಗ ತೊಡಗಿದಳು. ಗಂಟೆಗಳ ಕಾಲ ಕೊಠಡಿಯೊಳಗೆ ಬಾಗಿಲು ಮುಚ್ಚಿ ಕುಳಿತಿರುತ್ತಿದ್ದಳು ಮತ್ತು ಹೊಟ್ಟೆಗೆ ತಿನ್ನುತ್ತಿರಲಿಲ್ಲ ಎಂದು ಆಕೆಯ ತಾಯಿ ಹೇಳಿದ್ದಾರೆ.

ಪಂಚಾಯತ್ ಸಭೆಯೊಂದರಲ್ಲೂ ಸಂತ್ರಸ್ತೆಯ ತಂದೆ ಮತ್ತು ಮಾವನಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಲಾಗಿತ್ತು. ಬುಲಂದ್ಶಹರ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಕೂಡ ಜಹಂಗೀರಾಬಾದ್ ನ ಸ್ಥಳೀಯ ಪೊಲೀಸರು ಬೆದರಿಕೆಯ ಕುರಿತು ಅರಿತಿದ್ದರು ಎಂಬುದನ್ನು ಒಪ್ಪಿದ್ದಾರೆ.

 “ತಮಗೆ ಬೆದರಿಕೆ ಹಾಕಲಾಗಿರುವ ಕುರಿತು ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು ಎಂಬ ಕುಟುಂಬದ ಹೇಳಿಕೆಯನ್ನು ಆಧರಿಸಿ ಸಬ್ ಇನ್ ಸ್ಪೆಕ್ಟರ್ ಕಮಲ್ ಕಾಂತ್ ಮತ್ತು ಇನ್ನೋರ್ವ ಅಧಿಕಾರಿ ಗೌತಮ್ ರನ್ನು ಕರ್ತವ್ಯ ದೋಷಕ್ಕಾಗಿ ಅಮಾನತುಗೊಳಿಸಲಾಗಿದೆ” ಎಂದು ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಕರಣವನ್ನು ಹಿಂದೆಗೆಯುವುದಕ್ಕಾಗಿ ಇತರ ತಂತ್ರಗಾರಿಕೆಗಳನ್ನೂ ಬಳಸಲಾಗಿತ್ತು. “ಚೈಂಟಾ (ಹರೀಶ್) ನ ಹೆತ್ತವರು ನಮ್ಮ ಮನೆಗೆ ಬಂದು ಇದೇ ಜಾಗದಲ್ಲಿ ಕ್ಷಮೆ ಕೇಳಿದ್ದರು” ಎಂದು ಸಂತ್ರಸ್ತೆಯ ತಂದೆ ಮನೆಯ ಬೇವಿನ ಮರದ ಅಡಿಯ ಜಾಗವನ್ನು ತೋರಿಸುತ್ತಾ ಹೇಳಿದರು.

ಅದೇ ಜಾಗದಲ್ಲಿ ನವೆಂಬರ್ 17ರಂದು ಬೆಳಗ್ಗೆ ಆಕೆಯನ್ನು ಜೀವಂತವಾಗಿ ದಹಿಸಲಾಗಿತ್ತು. ಅಂದು ಸಂತ್ರಸ್ತೆ ತನ್ನ ತಾಯಿಯೊಂದಿಗೆ ಊಟವನ್ನು ಸಿದ್ಧಪಡಿಸುತ್ತಿದ್ದಾಗ ಗುಂಪೊಂದು ಮನೆಯನ್ನು ಪ್ರವೇಶಿಸಿತ್ತು. ಈ ಸಂದರ್ಭದಲ್ಲಿ ಗದ್ದಲವುಂಟಾಗಿತ್ತು ಮತ್ತು ಸಂತ್ರಸ್ತೆಯನ್ನು ಸುಟ್ಟುಹಾಕಲಾಗಿತ್ತು.

ಆರೋಪಿಯ ಸಂಬಂಧಿಗಳಾದ ಸಂಜಯ್ ಮತ್ತು ಆತನ ಪತ್ನಿಯನ್ನು ಪೊಲೀಸರು ಹಿಂದೆಯೇ ಬಂಧಿಸಿರುತ್ತಿದ್ದರೆ ಈ ರೀತಿ ಸಂಭವಿಸುತ್ತಿರಲಿಲ್ಲ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

- Advertisement -