“ಉಪ್ಪು ಹುಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಬಜೆಟ್”: ಎಚ್.ಡಿ.ಕುಮಾರಸ್ವಾಮಿ ಕಟುಟೀಕೆ

Prasthutha|

ಇದು ಕೇವಲ ಅಂಕಿ-ಅಂಶಗಳ ಅಲಂಕಾರಿಕ ಬಜೆಟ್ ಮಾತ್ರ!

- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದು “ಉಪ್ಪು ಉಳಿ ಖಾರ” ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ನೀರಸ ಬಜೆಟ್ ಎಂದು ಮಾಜಿ ಮಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಬಜೆಟ್ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಕೇವಲ ಅಂಕಿ ಅಂಶಗಳನ್ನು ಅಲಂಕರಿಸಿ ಮಂಡಿಸಿದ ಬಜೆಟ್ ಇದಾಗಿದೆಯಷ್ಟೇ. ಇದು ಕೇವಲ ಅಲಂಕಾರಿಕ ಮುಂಗಡ ಪತ್ರ” ಎಂದು ಅಭಿಪ್ರಾಯಪಟ್ಟರು.

- Advertisement -

ಮುಖ್ಯಮಂತ್ರಿಗಳು ಅನುಭವಿಗಳು. ಐದು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. ಎರಡೂವರೆ ವರ್ಷ ಗೃಹ ಸಚಿವರಾಗಿದ್ದರು. ಆದರೂ ಅವರು ಸ್ವತಂತ್ರವಾಗಿ ಮುಂಗಡ ಪತ್ರ ಮಂಡಿಸಿರುವ ಬಗ್ಗೆ ನನಗೆ ಸಂಶಯವಿದೆ. ಯಾರದ್ದೋ ಒತ್ತಡಕ್ಕೆ ಸಿಲುಕಿ ಮಂಡಿಸಿದಂತಿದೆ. ತಮ್ಮ ಚೊಚ್ಚಲ ಮುಂಗಡ ಪತ್ರವನ್ನೇ ಎರಡು ಗಂಟೆಗಳ ಕಾಲ ಶ್ರಮಪಟ್ಟು ಓದಿದರಾ ಅನ್ನುವುದು ನನ್ನ ಅಭಿಪ್ರಾಯ. ಅವರಿಗೆ ವಿಶ್ವಾಸದ ಕೊರತೆ ಇದ್ದಂತೆ ಇತ್ತು ಎಂದು ನನಗೆ ಅನಿಸಿತು ಎಂದು ಅವರು ಹೇಳಿದರು.

ನಿರುದ್ಯೋಗದ ಬಗ್ಗೆ ಚಕಾರವಿಲ್ಲ:

ಕೋವಿಡ್ ನಂತರ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸದಾಗಿ ಉದ್ಯೋಗಾವಕಾಶ ಆಗುತ್ತಿಲ್ಲ. ಯುವಜನರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಎಲ್ಲೂ ಕೆಲಸ ಸಿಗುತ್ತಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕೊರೊನಾದಿಂದ ಆಗಿದ್ದ ಅನಾಹುತವನ್ನು ಸುಧಾರಿಸುವ ಬಗ್ಗೆ ಬಜೆಟ್ಟಿನಲ್ಲಿ ಮಾತೇ ಇಲ್ಲ. ಆದರೂ ಸಂಕಷ್ಟ ಕಾಲದಲ್ಲೂ ಆದಾಯ ನಿರೀಕ್ಷೆ ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಕುಮಾರಸ್ವಾಮಿ ಟೀಕಿಸಿದರು.

ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಬಜೆಟ್ʼನಲ್ಲಿ ಪರಿಹಾರ ಇರುತ್ತದೆ ಎನ್ನುವುದು ನನ್ನ ಮತ್ತು ಜನರ ನಿರೀಕ್ಷೆ ಆಗಿತ್ತು. ಆದರೂ ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಏನನ್ನೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಗ್ರೈಂಡರ್ʼನಲ್ಲಿ ಮಿಕ್ಸ್ ಮಾಡಿದ್ದಾರೆ!:

ಕೃಷಿ, ನೀರಾವರಿ ಸೇರಿ ಐದು ವಲಯಗಳು ಎಂದು ಹೊಸ ಪ್ರಯೋಗ ಮಾಡಲು ಹೋಗಿದ್ದೇವೆ ಎಂದು ಪ್ರದರ್ಶನ ಮಾಡಿದ್ದಾರೆ. ಎಲ್ಲಾ ವಲಯಗಳನ್ನೂ ಮಿಕ್ಸ್ ಮಾಡಿ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿದ ಹಾಗೆ ಮಾಡಿದ್ದಾರೆ. ಯಾರಿಗೂ ಏನೂ ಕಾಣಬಾರದು ಎನ್ನುವ ಹಾಗೆ ಮಾಡಿದ್ದಾರೆ ಎಂದು ಮುಂಗಡ ಪತ್ರವನ್ನು ಮಾಜಿ ಸಿಎಂ ವಿಶ್ಲೇಷಣೆ ಮಾಡಿದರು.

ಮೀಸಲು ಅರಣ್ಯದಲ್ಲಿ ಉದ್ಯಾನವನ ಬಾಲಿಷ ಘೋಷಣೆ:

ಮೀಸಲು ಅರಣ್ಯ ಪ್ರದೇಶ ಜಾರಕು ಬಂಡೆ ಅರಣ್ಯದಲ್ಲಿ ಪಾರ್ಕ್ ಮಾಡುವ ಬಗ್ಗೆ ಹೇಳುವುದಾದರೆ, “ಈಗಾಗಲೇ ನಗರದಲ್ಲಿ ಅನೇಕ ಉದ್ಯಾನವನಗಳು ಇವೆ. ಅನೇಕ ಪಾರ್ಕ್ʼಗಳಲ್ಲಿ ಈಗಾಗಲೇ ಜನರು ವಾಯುವಿಹಾರ ಮಾಡುತ್ತಿದ್ದಾರೆ. ಲಾಲ್ ಬಾಗ್ ನಂಥ ಬೊಟಾನಿಕಲ್ ಗಾರ್ಡನ್ ನಗರದಲ್ಲಿದೆ. ದೇಶದ 12 ಬೊಟಾನಿಕಲ್ ಗಾರ್ಡೆನ್ʼಗಳಲ್ಲಿ ಅದೂ ಒಂದು. ಅಲ್ಲಿ ಸಂಶೋಧನೆಯನ್ನು ಕೂಡ ನಡೆಸಬಹುದು. ದೇಶ-ವಿದೇಶಗಳ ಸಾವಿರಾರು ತಳಿಯ ಸಸ್ಯಗಳಿವೆ. ಆದರೆ ಮೀಸಲು ಅರಣ್ಯದ ೩೫೦ ಎಕರೆಯಲ್ಲಿ ಉದ್ಯಾನವನ ಮಾಡುವ ಅಗತ್ಯವೇನು? ಇದು ಅತ್ಯಂತ ಬಾಲಿಷ ಪ್ರಸ್ತಾವನೆ ಎಂದು ಮಾಜಿ ಸಿಎಂ ತರಾಟೆಗೆ ತೆಗೆದುಕೊಂಡರು.

ರಾಜ್ಯಪಾಲರ ಭಾಷಣವೇ ಕಳಪೆ, ಬಜೆಟ್ ಕೂಡ ಹಾಗೇ ಇದೆ:

ಕಳೆದ ಕಲಾಪದಲ್ಲಿ ನಡೆದ ರಾಜ್ಯಪಾಲರ ಭಾಷಣವೇ ಕಳಪೆ. ಬಜೆಟ್ ಕೂಡ ಹಾಗೆಯೇ ಇದೆ. ಇನ್ನು ಮೇಕೆದಾಟು ಯೋಜನೆಗೆ 1000 ಕೋಟಿ ಘೋಷಣೆ ಮಾಡಿದ್ದಾರೆ. ನಿನ್ನೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಅವರು ಈ ಯೋಜನೆಗೆ 5000 ಕೋಟಿ ನೀಡಬೇಕು ಎಂದು ಹೇಳಿದ್ದರು. ಬಹುಶಃ ಅವರಿಗೆ ಗೌರವ ಕೊಡೋದಿಕ್ಕೆ 1000 ಕೋಟಿ ಇಟ್ಟಿದ್ದಾರೇನೋ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 23,000 ಕೋಟಿ ರೂ. ಬೇಕು. ಆದರೆ ಇವರು ಕೊಟ್ಟಿರುವುದು ಕೇವಲ 3000 ಕೋಟಿ ರೂ. ಮಾತ್ರ. ಹತ್ತು ವರ್ಷವಾದರೂ ಒಂದು ಹನಿ ನೀರನ್ನೂ ಕೊಡದ ಎತ್ತಿನಹೊಳೆಗೆ ಮತ್ತೆ 3000 ಕೋಟಿ ರೂ. ಘೋಷಣೆ ಮಾಡಿದ್ದಾರೆ.ಅದಕ್ಕೆ ನಾನು ಹೇಳಿದ್ದು, ಇದು ಅಂಕಿ ಅಂಶಗಳ ಅಲಂಕಾರಿಕ ಬಜೆಟ್ ಎಂದು ಕುಮಾರಸ್ವಾಮಿ ತಿಳಿಸಿದರು.

Join Whatsapp