ಬೆಂಗಳೂರು: ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ತೋರಿಸುತ್ತೀರಾ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಘೋಷಿಸಿರುವ ಗ್ಯಾರಂಟಿ ಜಾರಿ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ನವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡದ ಕಾಂಗ್ರೆಸ್ ವಿರುದ್ಧ ಅಧಿವೇಶನ ಆರಂಭದ ದಿನದಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಬೇಕು. ನಮ್ಮ ಶಾಸಕರು ಅಧಿವೇಶನ ನಡೆಸಲು ಬಿಡದೆ ಹೋರಾಡಬೇಕು. ಉಪವಾಸ ಸತ್ಯಾಗ್ರಹ ಬೇಡ, ಊಟ ಮಾಡಿ ಪ್ರತಿಭಟನೆ ಮಾಡೋಣ. ಈ ಸರ್ಕಾರದ ಮೂಗು ಹಿಂಡುವ ಕೆಲಸ ನಾವು ಮಾಡೋಣ ಎಂದು ಹೇಳಿದ ಯಡಿಯೂರಪ್ಪ, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಜೊತೆ 10 ಕೆಜಿ ಅಕ್ಕಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ನವರಿಗೆ ರಾಜಕೀಯ ದೊಂಬರಾಟ ಮಾಡಲು ಬಿಡುವುದಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಸಾಧನೆ ಮಾತಾಡಬೇಕು, ಮಾತಾಡುವುದೇ ಸಾಧನೆ ಆಗಬಾರದು ಎಂದು ಯಡಿಯೂರಪ್ಪ ಹೇಳಿದರು.