ಬೆಂಗಳೂರು: ಮನೆ ಬ್ರೋಕರ್ ರೊಬ್ಬರನ್ನು ಅಪಹರಿಸಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಭೇದಿಸಿರುವ ವೈಟ್ ಫೀಲ್ಡ್ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದ್ರಾವತ್ ದೇವ ಅಲಿಯಾಸ್ ದೇವ (36), ದಡ್ಡಿ ಕಟ್ಟಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿಕಾರ್ಜುನ್ (32,) ಭೋಯಾ ಮದನ್ಕುಮಾರ್ ಅಲಿಯಾಸ್ ಕುಮಾರ್ (29) ಸುಂಕಣ್ಣ (40) ಪ್ರಶಾಂತ್(24) ಹಾಗೂ ಚಂದ್ರಶೇಖರ್ (29) ಬಂಧಿತ ಆರೋಪಿಗಳಾಗಿದ್ದಾರೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕಳೆದ ಜೂ 26 ರಂದು ರಾತ್ರಿ ಹೂಡಿಯ ಸುಂದರಪ್ಪ ಲೇಔಟ್ ನ ಸಿದ್ದಪ್ಪ (41) ಅವರನ್ನು ಅರೋಪಿಗಳು ಅಪಹರಿಸಿದ ಆರೋಪಿಗಳು 50 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿದ್ದರು. 50 ಲಕ್ಷ ರೂಗಳನ್ನು ತೆಗೆದುಕೊಂಡು ಆಂಧ್ರಪ್ರದೇಶದ ಕರ್ನೂಲ್ ಗೆ ಬಂದು ನೀಡಿ ನಿಮ್ಮ ಪತ್ನಿಯನ್ನು ಬಿಡಿಸಿಕೊಂಡು ಸಿದ್ದಪ್ಪ ಪತ್ನಿ ಚಂದ್ರಮ್ಮ ಅವರಿಗೆ ತಿಳಿಸಿದ್ದರು. ಈ ಸಂಬಂಧಿಸಿದಂತೆ ಮಹದೇವಪುರ ಪೊಲೀಸರಿಗೆ ಚಂದ್ರಮ್ಮ ನೀಡಿದ ದೂರು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಮಹದೇವಪುರ ಪೊಲೀಸರ ವಿಶೇಷ ತಂಡ ಆಂಧ್ರ ಪೊಲೀಸರ ಸಹಕಾರ ಪಡೆದು ಸಿದ್ದಪ್ಪ ಅವರನ್ನು ಸಿನಿಮೀಯ ರೀತಿಯಲ್ಲಿ ಆಂಧ್ರಪ್ರದೇಶ ಕರ್ನೂಲ್ನಿಂದ 50 ಕಿ.ಮೀ. ದೂರದ ಎರಕಲಚೆರವು ಗ್ರಾಮದಲ್ಲಿ ಬಂಧಿಯಾಗಿರುವುದನ್ನು ಬಿಡಿಸಿ ಸುರಕ್ಷಿತವಾಗಿ ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಬ್ರೋಕರ್ ಸಿದ್ದಪ್ಪ ಆರೋಪಿಗಳ ಹಣವನ್ನು ದ್ವಿಗುಣ ಮಾಡುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣ ಪಡೆದು ವಾಪಸು ಕೊಡದೇ ವಂಚಿಸಿದ್ದು ಇದರಿಂದ ಆಕ್ರೋಶಗೊಂಡು ಅಪಹರಿಸಿರುವುದು ಕಂಡುಬಂದಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೃತ್ಯ ನಡೆದ 24 ಗಂಟೆಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ ಎಂದರು.