ಲಂಚ ಪ್ರಕರಣ: ಶಾಸಕ ವಿರೂಪಾಕ್ಷಪ್ಪ, ಸಿಎಂ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು: ಯು.ಟಿ ಖಾದರ್

Prasthutha|

ಮಂಗಳೂರು: ಬಿಜೆಪಿ ಶಾಸಕನ ಪುತ್ರ ಲಂಚ ಸ್ವೀಕರಿಸಿರುವುದು ದೃಢಪಟ್ಟಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

- Advertisement -


ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ, ಮೋದಿ ಸೇರಿದಂತೆ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ಇದೇ ವೇಳೆ ಬಿಜೆಪಿಯ ಲಂಚಾವತಾರ ಜಗಜ್ಜಾಹೀರಾಗಿದೆ. ಇನ್ನು ಯಾವ ಮುಖ ಇಟ್ಟು ಬಿಜೆಪಿಯವರು ಮತ ಕೇಳುತ್ತಾರೆ. ಬಿಜೆಪಿಯವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ರಾಜೀನಾಮೆ ನೀಡಲು ಹೇಳಿ ಎಂದು ಸವಾಲು ಹಾಕಿದರು.


ಗ್ಯಾಸ್ ಬೆಲೆ ಹೆಚ್ಚಳವಾಗಿದೆ. ಅಲ್ಲದೆ ಇತರ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಿದೆ. ಇದರಲ್ಲಿ ಬಿಜೆಪಿಯ ನಿಲುವು ಏನು ಎಂಬುವುದನ್ನು ಸ್ಪಷ್ಟಪಡಿಸಲಿ. ಇದರ ಬಗ್ಗೆ ಅವರು ಮಾತನಾಡಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಅಧಿಕೃತವಾಗಿ 40% ಕಮಿಷನ್ ಬಗ್ಗೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ದೂರು ನೀಡಿದ್ದರು. ಆದರೆ ಒಂದು ಆದೇಶದ ಪತ್ರ ಕೂಡ ಕೇಂದ್ರದಿಂದ ರಾಜ್ಯಕ್ಕೆ ಬರಲಿಲ್ಲ. ಅದರ ಬದಲು ದೂರು ನೀಡಿದವರನ್ನು ನೋಟಿಸ್ ಕೊಟ್ಟು ಅವರ ಮೇಲೆ ಪ್ರಕರಣ ದಾಖಲು ಮಾಡಲು ಪ್ರಯತ್ನಿಸಿದ್ದಾರೆ ಎಂದರು.

- Advertisement -


ದೇಶದ ಇತಿಹಾಸದಲ್ಲಿ ಎಡಿಜಿಪಿ ಜೈಲಿಗೆ ಹೋದ ಉದಾಹರಣೆ ಇರಲಿಲ್ಲ. ಕರ್ನಾಟಕ ಸರ್ಕಾರದ ಬಿಜೆಪಿ ಅವಧಿಯಲ್ಲಿ ಎಡಿಜಿಪಿಯೂ ಜೈಲಿಗೆ ಹೋಗುವಂತಾಯ್ತು. ಹಿಂದೆಲ್ಲ ಬಿಹಾರ, ಉತ್ತರ ಪ್ರದೇಶದ ಭ್ರಷ್ಟಾಚಾರದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಈಗ ಕರ್ನಾಟಕ ರಾಜ್ಯ ಭ್ರಷ್ಟಾಚಾರ ವಿಚಾರದಲ್ಲಿ ಚರ್ಚೆಯ ವಸ್ತುವಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಮೋದಿಗೆ ಪತ್ರ ಬರೆದಿದ್ದರು. ಆದರೆ ಪ್ರಧಾನಿ ಈ ಬಗ್ಗೆ ಯಾವುದೇ ತನಿಖೆಗೂ ಸೂಚನೆ ನೀಡಿಲ್ಲ. ಭ್ರಷ್ಟಾಚಾರ ವಿರೋಧಿಸುತ್ತೇನೆ ಎನ್ನುವ ಮೋದಿ ಮೌನ ವಹಿಸಿದ್ದು ಏನನ್ನು ಸೂಚಿಸುತ್ತದೆ ಎಂದರು.
ರಾಜ್ಯದ ಬಿಜೆಪಿ ನಾಯಕರು ಪ್ರತಿ ಬಾರಿ ನೀವು ಸಾಕ್ಷಿ ಕೊಡಿ ಅಂತಿದ್ರು. ಆದರೆ ಈಗ ಸಾಕ್ಷಿ ನಮ್ಮ ಕೈಗೆ ಸಿಕ್ಕಿದೆ, ಪ್ರಧಾನಿ ರಾಜ್ಯಕ್ಕೆ ಬಂದಾಗ ಈ ಬಗ್ಗೆ ಮಾತನಾಡಲಿ. ಜನರ ಟ್ಯಾಕ್ಸ್ ನಿಂದ ಸರ್ಕಾರ ಬದುಕುತ್ತಿದೆ ಎನ್ನುವುದು ತಿಳಿದಿರಬೇಕು. ಅದು ಬಿಟ್ಟು ಸಿಕ್ಕಿದ್ದಕ್ಕೆಲ್ಲ ಜನರ ಮೇಲೆ ಟ್ಯಾಕ್ಸ್ ಹಾಕಿ ಭ್ರಷ್ಟಾಚಾರ ಮಾಡುತ್ತಾ ಇದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp