ಬೆಂಗಳೂರು: ನನ್ನ ಲಂಚ ಮಂಚ ಹೇಳಿಕೆಯು ಯಾರಿಗಾದರೂ ನೋವುಂಟು ಮಾಡಿದರೆ ಕ್ಷಮೆ ಕೇಳಲು ನಾನು ಸಿದ್ದನಿದ್ದೇನೆ. ಆದರೆ ನಿಜವಾಗಿಯೂ ಮಹಿಳೆಯರಿಗೆ ಅಪಮಾನ ಮಾಡಿದ ಬಿಜೆಪಿ ನಾಯಕರು ಕ್ಷಮೆ ಕೇಳಲು ಸಿದ್ದರಿದ್ದಾರೆಯೇ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸರಕಾರಿ ಕೆಲಸಕ್ಕಾಗಿ ಹೆಣ್ಣು ಮಕ್ಕಳು ಮಂಚ ಹತ್ತಬೇಕು ಎಂದು ಖರ್ಗೆ ನಿನ್ನೆ ಹೇಳಿದ್ದು , ಅದನ್ನು ಬಿಜೆಪಿ ವಿವಾದ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವರೊಬ್ಬರು ಪರಸ್ತ್ರೀಯೊಂದಿಗೆ ಮಾಡಿದ ಅಶ್ಲೀಲ ಸಂಭಾಷಣೆ ವೈರಲ್ ಆದಾಗ ಬಿಜೆಪಿಯವರು ಯಾರೂ ಕ್ಷಮೆಯನ್ನು ಆಗ್ರಹಿಸಿಲ್ಲ
ಕೆಲಸಕ್ಕಾಗಿ ಬಂದ ಯುವತಿಯನ್ನು ಇದೇ ಸರಕಾರದ ಸಚಿವರೊಬ್ಬರು ಮೋಸ ಮಾಡಿ, ಸಿಡಿ ಸಮೇತ ಸಿಕ್ಕಿಬಿದ್ದು ರಾಜೀನಾಮೆ ನೀಡಬೇಕಾಯಿತು. ಸದನದಲ್ಲಿ ನೀಲಿಚಿತ್ರ ನೋಡಿದವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಕೂಡಾ ಇದೇ ಬಿಜೆಪಿ. ಇವರ್ಯಾರಿಂದ ಕ್ಷಮೆಯನ್ನು ಯಾಕೆ ಆಗ್ರಹಿಸಿಲ್ಲ ಎಂದು ವಾಗ್ಧಾಳಿ ಮಾಡಿದ್ದಾರೆ.
ನಾನು ‘ಲಂಚ ಮಂಚದ ಸರ್ಕಾರ’ ಎಂದಿದ್ದಕ್ಕೆ ಬಿಜೆಪಿಯವರಿಗೆ ಉರಿ ಬಿದ್ದಿದೆ. ಸತ್ಯ ಆ ಮಟ್ಟಿಗೆ ಕಹಿಯಾಗಿರುತ್ತದೆ. ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವರು, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ. ಬಿಜೆಪಿ ಸಂಸದರು, ಮಂತ್ರಿಗಳು,ಶಾಸಕರು ಕೋರ್ಟಿನಲ್ಲಿ ಸಾಲು ಸಾಲು ತಡೆಯಾಜ್ಞೆ ತಂದಿದ್ದೇಕೆ, ಎಂದು ಪ್ರಶ್ನಿಸಿದ್ದಾರೆ.