ಕೋಲ್ಕತ್ತಾ: ದೇಶದಲ್ಲಿರುವ ಎಲ್ಲಾ ರಾಜ್ಯ ಬಿಜೆಪಿಯೇತರ ಸರ್ಕಾರಗಳನ್ನು ಒಡೆಯುವುದು ಬಿಜೆಪಿಯ ಹೊಸ ಕಾಯಕವಾಗಿದೆ. ಬಿಜೆಪಿ 2024ರಲ್ಲಿ ಮಣ್ಣುಮುಕ್ಕಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇಂದು ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆಯ ಸಭೆಯಲ್ಲಿ ಸಾರ್ವಜನಿಕನ್ನುದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ವ್ಯಾಪಕವಾಗುತ್ತಿರುವ ಹಣದುಬ್ಬರದ ಬಗ್ಗೆ ಅವರು ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರು ಟಿಎಂಸಿ ಸೋಲಿಸಲು ಸಾಕಷ್ಟು ಪ್ರಯತ್ನಿಸಿದರೂ ಕೂಡ ಯಶಸ್ವಿಯಾಗಲಿಲ್ಲ ಎಂದು ಕಿಡಿ ಕಾರಿದರು. 2014 ರಲ್ಲಿ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಕೇಂದ್ರದಲ್ಲಿ ಬರದಂತೆ ತಡೆಯಲಾಗುವುದೆಂದು ಅವರು ತಿಳಿಸಿದರು.
2024ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಗೆ ಗೆದ್ದು ಬರುವುದಿಲ್ಲ. ಪಶ್ಚಿಮ ಬಂಗಾಳದಲ್ಲಂತೂ ಅದನ್ನು ಪೂರ್ಣವಾಗಿ ಸೋಲಿಸಲಾಗುವುದು ಎಂದು ಬ್ಯಾನರ್ಜಿ ಹೇಳಿದರು.
ಬಿಜೆಪಿಯವರು ಇನ್ನೂ ಧರ್ಮದ ಅಮಲಿನಲ್ಲಿಯೇ ಇದ್ದಾರೆ, ಜನಸಾಮಾನ್ಯರ ಮೇಲೆ ಎಲ್ಲ ಬಗೆಯ ಬೆಲೆಯೇರಿಕೆಯ ಹೊರೆ ಹೊರಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯು ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ ಎಂದು ಹೇಳಿದರು.
ಇಂದು ಹುತಾತ್ಮರ ದಿನಾಚರಣೆಯ ಸಂಬಂಧ ಹಲವು ಸ್ಟೇಡಿಯಂಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಟಿಎಂಸಿ ಕಾರ್ಯಕರ್ತರಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ಹಲವು ಶಾಲೆಗಳಿಗೆ ರಜೆ ನೀಡಲಾಗಿತ್ತು ಹಾಗೂ 10ಕ್ಕೂ ಹೆಚ್ಚು ರಸ್ತೆಗಳ ವಾಹನ ಸಂಚಾರವನ್ನು ಬೇರೆ ಕಡೆಗೆ ತಿರುಗಿಸಲಾಗಿತ್ತು.
ಕೊರೋನಾ ಕಾರಣಕ್ಕಾಗಿ 2019ರ ಬಳಿಕ ಹುತಾತ್ಮರ ದಿನದ ಮೆರವಣಿಗೆ ಸಮಾವೇಶ ನಡೆಸಿರಲಿಲ್ಲ. ಬರೇ ಕಚೇರಿಯೊಳಗಿನ ಕಾರ್ಯಕ್ರಮವಾಗಿ ಕಳೆದೆರಡು ವರ್ಷ ನಡೆದಿತ್ತು.