ನವದೆಹಲಿ: 2021ರ ಭಾರತೀಯ ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕ ಹೊರಬಿದ್ದಿದ್ದು, ಕರ್ನಾಟಕ, ತೆಲಂಗಾಣ, ಹರಿಯಾಣಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.
ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಅವರು ಜು. 21ರಂದು ಮುಖ್ಯ ಕಾರ್ಯಕಾರಿ ಅಧಿಕಾರಿ ಪರಮೇಶ್ವರನ್ ಅಯ್ಯರ್ ಸಮ್ಮುಖದಲ್ಲಿ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದರು. ಈ ಸೂಚ್ಯಂಕಗಳನ್ನು ಜಾಗತಿಕ ಆವಿಷ್ಕಾರ ಸೂಚ್ಯಂಕದ ನಿಯಮಾವಳಿಯಡಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕವು ಸತತ ಮೂರನೆಯ ವರ್ಷ ಮೊದಲ ಸ್ಥಾನದಲ್ಲಿದೆ. ಮೊದಲ ಮತ್ತು ಎರಡನೆಯ ಆವಿಷ್ಕಾರ ಸೂಚ್ಯಂಕಗಳು ಕ್ರಮವಾಗಿ 2019ರ ಅಕ್ಟೋಬರ್ ಹಾಗೂ 2021ರ ಜನವರಿಯಲ್ಲಿ ಬಿಡುಗಡೆ ಆಗಿದ್ದವು.
ಜಿಐಐ- ಜಾಗತಿಕ ಆವಿಷ್ಕಾರ ಸೂಚ್ಯಂಕದ ಚೌಕಟ್ಟಿನಡಿ ನಮ್ಮ ಮೂರನೆಯ ವರ್ಷದ ಸೂಚ್ಯಂಕವು ವಿಶ್ಲೇಷಣೆ ಆಗಿದೆ. ಕಳೆದ ಬಾರಿ 36 ವಿಶ್ಲೇಷಣಾ ಸೂಚಕಗಳು ಬಳಕೆಯಾಗಿದ್ದರೆ ಈ ಬಾರಿ ಜಿಐಐ ಹೇಳಿದ 66 ಸೂಚಕಗಳಂತೆ ತುಲನೆ ನಡೆಸಿ ಆಯ್ಕೆ ಮಾಡಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 17 ಪ್ರಮುಖ ರಾಜ್ಯ ಘಟಕಗಳಾಗಿ ವಿಂಗಡಿಸಲಾಗಿತ್ತು. 10 ಈಶಾನ್ಯ ಭಾರತದ ಗುಡ್ಡಗಾಡು ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶ ಹಾಗೂ ನಗರ ರಾಜ್ಯಗಳ ಸಾಧನೆಯನ್ನು ಹೋಲಿಸಿ ದಾಖಲಿಸಲಾಗಿದೆ ಎಂದು ನೀತಿ ಆಯೋಗ ಹೇಳಿಕೆ ನೀಡಿದೆ.