ನವದೆಹಲಿ: ಏಕಬಳಕೆ ಅಂದರೆ ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಕಪ್, ಪ್ಲೇಟ್ ಹಾಗೂ ಸ್ಟ್ರಾಗಳ ಉತ್ಪಾದನೆಯನ್ನು ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ನಿಷೇಧಿಸಿ ಸರ್ಕಾರ ಕ್ರಮಜರುಗಿಸಿದಾಗೆಲ್ಲ ಅವುಗಳ ಉತ್ಪಾದನೆಯನ್ನೇ ಏಕೆ ನಿಷೇಧಿಸಬಾರದು ಎಂದು ಜನರು ಪ್ರಶ್ನಿಸುತ್ತಿದ್ದರು. ಈ ನಿಟ್ಟಿನಲ್ಲಿ ಭಾರತವನ್ನು ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು,
ಈ ವರ್ಗಕ್ಕೆ ಸೇರುವ ಪ್ಲಾಸ್ಟಿಕ್ ಕಡ್ಡಿಗಳಿಂದ ಕಿವಿ ಮೊಗ್ಗುಗಳು, ಬಲೂನುಗಳಿಗೆ ಪ್ಲಾಸ್ಟಿಕ್ ತುಂಡುಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್ಗಳು, ಐಸ್ ಕ್ರೀಮ್ ಸ್ಟಿಕ್ಗಳು ಸ್ಟ್ರಾ, ಕಪ್, ಪ್ಲೇಟ್, ಟ್ರೇ, ಪಾಲಿಸ್ಟಿರೀನ್ ಮುಂತಾದವುಗಳ ಉತ್ಪಾದನೆಯನ್ನೇ ನಿಲ್ಲಿಸಲಿದೆ.
ಖರೀದಿ ಬಳಿಕ ಒಮ್ಮೆ ಮಾತ್ರ ಬಳಸಿ ವರ್ಜಿಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಏಕಬಳಕೆ ಉತ್ಪನ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, ಈ ನಿಯಮವು 2022ರ ಜುಲೈ 1ರಿಂದ ನಿಷೇಧ ಜಾರಿಗೆ ಬರಲಿದೆ ಎಂಬುದನ್ನೂ ತಿಳಿಸಿದೆ.