ಯುಎಇ ಅಧ್ಯಕ್ಷ ಶೇಖ್ ಖಲೀಫಾ ನಿಧನ: ಕರ್ನಾಟಕದಲ್ಲಿ ಇಂದು ಒಂದು ದಿನ ಶೋಕಾಚರಣೆ
Prasthutha: May 14, 2022

►►ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲು ಆದೇಶ
ಬೆಂಗಳೂರು: ನಿನ್ನೆ ನಿಧನರಾದ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಗೌರವಾರ್ಥ ಕರ್ನಾಟಕ ರಾಜ್ಯಾದ್ಯಂತ ಶನಿವಾರ ಒಂದು ದಿನದ ಮಟ್ಟಿಗೆ ಶೋಕಾಚರಣೆ ಘೋಷಿಸಲಾಗಿದೆ.
ರಾಜ್ಯಾದ್ಯಂತ ಶನಿವಾರ ಇಡೀ ದಿನ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ಕೂಡ ನಿನ್ನೆ ಆದೇಶ ಹೊರಡಿಸಿ, ದೇಶಾದ್ಯಂತ ಶನಿವಾರ ಒಂದು ದಿನ ಶೋಕಾಚರಣೆಗೆ ಸೂಚಿಸಿತ್ತು.
ಯುಎಇ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದ ಹಿನ್ನೆಲೆಯಲ್ಲಿ ಯುಎಇಯಲ್ಲಿ 40 ದಿನಗಳ ಕಾಲ ಶೋಕಾಚರಣೆ ಮತ್ತು ಮೂರು ದಿನಗಳ ಸರ್ಕಾರಿ ರಜೆ ಘೋಷಿಸಲಾಗಿದೆ.
