ಆನೇಕಲ್ ತಾಲ್ಲೂಕಿನಲ್ಲಿ ಬಾಲಕನ ಕೊಲೆ ಪ್ರಕರಣ: ಕೊಲೆ ಆರೋಪಿ ಅಣ್ಣನ ಬಂಧನ

Prasthutha|

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಹದಿಮೂರು ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಅಣ್ಣನೇ ಕ್ಷುಲ್ಲಕ‌ ಕಾರಣಕ್ಕಾಗಿ ತಮ್ಮನನ್ನು ಕೊಲೆಗೈದ ಪ್ರಕರಣ ಇದಾಗಿದೆ.

- Advertisement -

ಪ್ರಾಣೇಶ್ (13) ಕೊಲೆಯಾಗಿದ್ದ ಬಾಲಕನಾದರೆ, ಆತನ ಸಹೋದರ ಶಿವಕುಮಾರ್ (18) ಕೊಲೆ ಮಾಡಿದ ಆರೋಪಿ.

ಆನ್ಲೈನ್ ಗೇಮ್ ಆಡಲು ಮೊಬೈಲ್ ನೀಡದೇ ಇರುವ ಕಾರಣಕ್ಕಾಗಿ ಪಾತಕಿ, ತಮ್ಮನನ್ನು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಇಬ್ಬರೂ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ದಂಪತಿಯ ಮಕ್ಕಳು. ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಕುಟುಂಬ ಬಂದಿತ್ತು. ಪತಿ-ಪತ್ನಿ ಹಾಗೂ ಹಿರಿಯ ಮಗ ಶಿವಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ದ್ವಿತೀಯ ಪುತ್ರ ಪ್ರಾಣೇಶ್ ಸೂಳಕೆರೆ ಗ್ರಾಮದಲ್ಲಿ ಅಜ್ಜಿಯ ಜೊತೆಗೆ ವಾಸವಿದ್ದ.

ಬೇಸಿಗೆ ರಜೆಗೆ ನೆರಿಗಾ ಗ್ರಾಮದಲ್ಲಿನ ತಂದೆ ತಾಯಿ ಬಳಿಗೆ ಪ್ರಾಣೇಶ್‌ ಬಂದಿದ್ದ. ಮನೆಯಲ್ಲಿದ್ದ ಮೊಬೈಲಿನಲ್ಲಿ ಶಿವಕುಮಾರ್ ಯಾವಾಗ್ಲೂ ಆನ್ಲೈನ್ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮನೆಗೆ ಬಂದವನೇ ಮೊಬೈಲ್‌ನಲ್ಲಿ ತಾನು ಗೇಮ್ ಆಡಲು ಶುರು ಮಾಡಿದ್ದ. ಪ್ರಾಣೇಶ್ ಬಳಿ ಮೊಬೈಲ್ ನೀಡುವಂತೆ ಶಿವಕುಮಾರ್ ಕೇಳುತ್ತಿದ್ದ. ಆದರೆ ಪ್ರಾಣೇಶ್‌ ಮೊಬೈಲ್ ನೀಡುತ್ತಿರಲಿಲ್ಲ.

ನನಗೆ ಆನ್ಲೈನ್ ಗೇಮ್ ಆಡಲು ಮೊಬೈಲ್ ಸಿಗುತ್ತಿಲ್ಲ ಎಂದು ಶಿವಕುಮಾರ ಕುಪಿತಗೊಂಡಿದ್ದ. ಇಬ್ಬರೂ ಮೊಬೈಲ್‌ಗಾಗಿ ಆಗಾಗಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಹದಿನೈದನೇ ತಾರೀಕು ಗಾರೆ ಕೆಲಸಕ್ಕೆ ಹೋದ ಶಿವಕುಮಾರ ತಮ್ಮನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಕೆಲಸ ಮಾಡುತ್ತಿದ್ದ ಜಾಗದಿಂದ ಸಣ್ಣ ಸುತ್ತಿಗೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ.

ಬಯಲು ಶೌಚಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಶಿವಕುಮಾರ್, ಅಲ್ಲಿ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪ್ರಾಣೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ತಂದೆ ತಾಯಿ ಸಂಜೆ ಮನೆಗೆ ಬಂದು ಎಲ್ಲೆಡೆ ಹುಡುಕಾಡಿದ್ದರು. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಪೋಷಕರಿಗೆ ತಿಳಿಸಿದ್ದ ಶಿವಕುಮಾರ.

ಸರ್ಜಾಪುರ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ದರು. ತಮ್ಮನ ಶವವನ್ನು ನಾನೇ ಮೊದಲು ನೋಡಿದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೋಲೀಸರಿಗೆ ಅನುಮಾನ ಮೂಡಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಶಿವಕುಮಾರ್‌ನನ್ನು ಬಂಧಿಸಿದ ಸರ್ಜಾಪುರ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.

Join Whatsapp