ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ರೈತರ ಪ್ರತಿಭಟನೆಯ ಬಿಸಿ ಈಗ ದೇಶದ ಎರಡು ಪ್ರಮುಖ ಕಾರ್ಪೊರೇಟ್ ಕಂಪೆನಿಗಳ ಮೇಲೆ ತಟ್ಟಿದೆ. ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಜಿಯೋ ಸಿಮ್ ಮತ್ತು ಯೋಗಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ ಸಿಮ್ ವಿರುದ್ಧ ಎದ್ದಿರುವ ಆಕ್ರೋಶದಿಂದ ಬೆಚ್ಚಿಬಿದ್ದಿರುವ ರಿಲಯನ್ಸ್ ಇಂಡಸ್ಟ್ರೀಸ್, ಈ ಬಗ್ಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ದೂರನ್ನೂ ಸಲ್ಲಿಸಿದೆ. ಪ್ರತಿಸ್ಪರ್ಧಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ತನ್ನ ಗ್ರಾಹಕರನ್ನು ಸೆಳೆಯಲು ಅಪಪ್ರಚಾರಗಳನ್ನು ಮಾಡುತ್ತಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಆರೋಪಿಸಿದೆ. #BoycottJioSim ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳು ತಮ್ಮ ಕಂಪೆನಿಗೆ ಲಾಭ ತಂದುಕೊಡಲಿದೆ ಎಂಬುದಾಗಿ ಬಿಂಬಿಸಲಾಗುತ್ತಿದೆ. ಇದರಿಂದಾಗಿ ತಮ್ಮ ಸಂಸ್ಥೆಯ ಗ್ರಾಹಕರಿಂದ ದೊಡ್ಡ ಮಟ್ಟದ ಪೋರ್ಟ್ ಔಟ್ (ಬೇರೆ ಕಂಪೆನಿಗೆ ಸಿಮ್ ಬದಲಾಯಿಸಿಕೊಳ್ಳಲು ಕೋರಿಕೆ) ಮನವಿಗಳು ಬರುತ್ತಿವೆ ಎಂದು ಟ್ರಾಯ್ ಗೆ ಬರೆದ ಪತ್ರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಳಲನ್ನು ತೋಡಿಕೊಂಡಿದೆ.
ಭಾರ್ತಿ ಏರ್ಟೆಲ್ ಈ ಆರೋಪಗಳನ್ನು ತಳ್ಳಿ ಹಾಕಿದೆ. ರಿಲಯನ್ಸ್ ಆರೋಪಗಳು ಆಧಾರ ರಹಿತವಾದುದು ಎಂದು ಏರ್ಟೆಲ್ ತನ್ನ ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ. ತಮ್ಮ ಸಂಸ್ಥೆಯು ಪ್ರತಿಸ್ಪರ್ಧಿಗಳು ಮತ್ತು ಪಾಲುದಾರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ವೊಡಾಫೋನ್ ಐಡಿಯಾ ಕೂಡ ಆರೋಪಗಳನ್ನು ತಳ್ಳಿ ಹಾಕಿದ್ದು, ತಮ್ಮ ಸಂಸ್ಥೆಯು ನೈತಿಕತೆಯಿಂದ ಉದ್ಯಮ ನಡೆಸುತ್ತದೆ ಎಂದು ಹೇಳಿದೆ.
ಇನ್ನೊಂದೆಡೆ, ಯೋಗಗುರು ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಲಾಗುತ್ತಿದೆ. #BoycottPatanjali ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ನಲ್ಲಿದೆ. ನಾವು ರೈತರೊಂದಿಗಿದ್ದೇವೆ, ಪತಂಜಲಿ ಉತ್ಪನ್ನ ಬಹಿಷ್ಕಾರದ ಹ್ಯಾಶ್ ಟ್ಯಾಗ್ ಬೆಂಬಲಿಸುತ್ತೇವೆ ಎಂದು ಸಾವಿರಾರು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.