ರಣಜಿ ಟ್ರೋಫಿ: 198 ರನ್ ಮುನ್ನಡೆ ಸಾಧಿಸಿದ ಕರ್ನಾಟಕ

Prasthutha|

ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ದಿನದಾಟದ ಮುಕ್ತಾಯಕ್ಕೆ ಅತಿಥೇಯ ಕರ್ನಾಟಕ 198 ರನ್ ಗಳ ಮುನ್ನಡೆ ಸಾಧಿಸಿದೆ.  ಬೆಂಗಳೂರಿನ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ  ಕರ್ನಾಟಕ 8 ವಿಕೆಟ್ ನಷ್ಟದಲ್ಲಿ 100 ರನ್‌ ಗಳಿಸಿದೆ.  

- Advertisement -

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ನೆಲಕಚ್ಚಿ ಆಡುವಲ್ಲಿ ಖ್ಯಾತನಾಮರು ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದ್ದ ಆರ್.ಸಮರ್ಥ್ 11 ರನ್ ಮತ್ತು ಮಯಾಂಕ್ ಅಗರ್ವಾಲ್ 22 ರನ್‌ ಗಳಿಸಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ 10ರನ್, ಕೆ. ಸಿದ್ಧಾರ್ಥ್ 15ರನ್, ಕೀಪರ್ ಶ್ರೀನಿವಾಸ್ ಶರತ್  10 ರನ್‌ ಗಳಿಸಿ ನಿರ್ಗಮಿಸಿದರು.

ನಾಯಕ ಮನೀಶ್ ಪಾಂಡೆ 4 ರನ್‌ ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಐದು ರನ್‌ ಗಳಿಸಿರುವ ವಿಜಯ ಕುಮಾರ್ ವೈಶಾಕ್ ಮತ್ತು 1 ರನ್ ಗಳಿಸಿರುವ ಕೆ. ಗೌತಮ್ ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉತ್ತರಪ್ರದೇಶದ ಪರ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ 32 ರನ್ ನೀಡಿ 3 ವಿಕೆಟ್ ಪಡೆದರು.

- Advertisement -

155 ರನ್‌ ಗಳಿಗೆ ಉತ್ತರ ಪ್ರದೇಶ ಸರ್ವಪತನ
ಕರ್ನಾಟಕದ 253 ರನ್ ಬೆಂಬತ್ತಿದ ಉತ್ತರ ಪ್ರದೇಶ ತಂಡ, ಕನ್ನಡಿಗರ ಬಿಗು ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿ ಕೇವಲ 155 ರನ್‌ ಗಳಿಸುವಷ್ಟರಲ್ಲಿಯೇ ಆಲೌಟ್ ಆಯಿತು. ಮೂವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರೆ,  ಆರಂಭಿಕ ಆರ್ಯನ್ ಜುಯೆಲ್ 5 ಮತ್ತು  ನಾಯಕ ಕರಣ್ ಶರ್ಮಾ ಎರಡು ರನ್‌ ಗಳಿಸಿ ವೈಶಾಕ್‌ಗೆ ವಿಕೆಟ್ ಒಪ್ಪಿಸಿದರು. 

39 ರನ್‌ ಗಳಿಸಿದ ಪ್ರಿಯಂ ಗರ್ಗ್ ಟಾಪ್ ಸ್ಕೋರರ್ ಎನಿಸಿದರು. ರಿಂಕು ಸಿಂಗ್ 33 ಮತ್ತು ಕೊನೆಯ ಕ್ಷಣದಲ್ಲಿ ಬೌಲರ್ ಶಿವಂ ಮಾವಿ 32 ರನ್‌ ಗಳಿಸಿ ತಂಡದ ಮೊತ್ತವನ್ನು 100 ದಾಟಿಸಿದರು. ಬೌಲಿಂಗ್‌ನಲ್ಲಿ ಕರ್ನಾಟಕದ ಪರ ರೋನಿತ್ ಮೋರೆ 3 ವಿಕೆಟ್ ಪಡೆದರೆ, ವಿಜಯಕುಮಾರ್ ವೈಶಾಕ್, ವಿದ್ವತ್ ಕಾವೇರಪ್ಪ, ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದರು. ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು. 

ಇದಕ್ಕೂ ಮೊದಲು 7 ವಿಕೆಟ್ ನಷ್ಟದಲ್ಲಿ 213 ರನ್‌ ಗಳಿಂದ ಮಂಗಳವಾರದ ದಿನದಾಟ ಆರಂಭಿಸಿದ್ದ ಮನೀಷ್ ಪಾಂಡೆ ಸಾರಥ್ಯದ ರಾಜ್ಯ ತಂಡ, 253 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಪಂದ್ಯ ಪ್ರಾರಂಭವಾಗಿ 12 ಓವರ್ ಕಳೆಯುವಷ್ಟರಲ್ಲಿಯೇ ಪಾಂಡೆ ಪಡೆ ಸರ್ವಪತನ ಕಂಡಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ, ಸೋಮವಾರದ ಮೊದಲ ದಿನದಾಟದಲ್ಲಿ 7 ವಿಕೆಟ್ ನಷ್ಟದಲ್ಲಿ 213 ರನ್‌ ಗಳಿಸಿತ್ತು. 26 ರನ್’ಗಳಿಸಿ ಶ್ರೇಯಸ್ ಗೋಪಾಲ್ ಮತ್ತು 12 ರನ್ ಗಳೊಂದಿಗೆ  ವಿಜಯ ಕುಮಾರ್ ವೈಶಾಕ್ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. 

Join Whatsapp