ಗೋ ಹತ್ಯೆ ಮಾಡಿದ್ದಾನೆಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯ ಹತ್ಯೆ: 12 ಮಂದಿ ಪೊಲೀಸರ ವಿರುದ್ಧ ಎಫ್’ಐಆರ್

Prasthutha|

ಲಕ್ನೋ: ಗೋ ಹತ್ಯೆ ಮಾಡಿದ್ದಾನೆ ಎಂಬ ಆರೋಪದಲ್ಲಿ ಜೀಶನ್ ಹೈದರ್ (42) ಎಂಬ ವ್ಯಕ್ತಿಯ ಕೊಲೆ ಮಾಡಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ದಿಯೋಬಂದ್’ನ 12 ಪೊಲೀಸರ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ.

- Advertisement -

ದನ ಕದ್ದ ಆರೋಪದಲ್ಲಿ ಪೊಲೀಸರು 2021ರ, ಸೆಪ್ಟೆಂಬರ್ 5ರಂದು ಹೈದರ್ ಮೇಲೆ ಗುಂಡು ಹಾರಿಸಿದ್ದರು. ಗುಂಡು ತಗುಲಿ ಹೈದರ್ ಮೃತಪಟ್ಟಿದ್ದಾನೆ ಎಂಬುದು ಪೊಲೀಸರ ಹೇಳಿಕೆ. ಆದರೆ ದನ ಕದ್ದ ಎಂಬುದು ಪೊಲೀಸರ ಕಟ್ಟು ಕತೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿತ್ತು.

ಹಸು ಕಸಾಯಿಗೂ ನಮಗೂ ಸಂಬಂಧವಿಲ್ಲ. ಇದು ಪೊಲೀಸರು ಕಟ್ಟಿಕೊಟ್ಟಿರುವ ಕತೆ ಎಂದು ಹೈದರ್ ಪತ್ನಿ ಆಫ್ರೋಝ್ ಅವರು 2021ರ ನವೆಂಬರ್’ನಲ್ಲಿ ಸಹರಾನ್’ಪುರ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟರಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರು ತಕ್ಷಣ ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.

- Advertisement -

ಪೊಲೀಸರು ನನ್ನ ಗಂಡನನ್ನು ಕರೆದೊಯ್ದಾಗ ನಾವಿಬ್ಬರೂ ಮನೆಯಲ್ಲಿದ್ದೆವು. ಅನಂತರ ಕಾಲಿನಲ್ಲಿ ಗುಂಡು ಗಾಯದೊಡನೆ ಹೈದರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದರು ಎಂದು ಆಫ್ರೋಝ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ಆದರೆ ಪೊಲೀಸರ ಪ್ರಕಾರ, ದನ ಕಡಿದು ಮಾಂಸ ಮಾಡುವ ಬಗ್ಗೆ ಕರೆ ಬಂದಾಗ ಒಂದು ಸ್ಥಳಕ್ಕೆ ನಾವು ಹೋದೆವು. ಅಲ್ಲಿ ಹೈದರ್ ಮತ್ತು ಕೆಲವರು ನಾಡ ಪಿಸ್ತೂಲಿನೊಡನೆ ಪೊಲೀಸರಿಗೆ ಎದುರಾದರು.  

“ದನಗಳ್ಳರು ಗುಂಡು ಹಾರಿಸಿದ್ದರಿಂದ ನಾವು ಪ್ರತಿ ದಾಳಿ ನಡೆಸಿದೆವು. ಕಾಲಿಗೆ ಗುಂಡು ಬಿದ್ದು, ಹೈದರ್ ಗಾಯಗೊಂಡ. ಕೂಡಲೆ ಆಸ್ಪತ್ರೆಗೆ ಸಾಗಿಸಿದರೂ ಸಾವಿಗೀಡಾದ” ಎನ್ನುವುದು ಪೊಲೀಸರ ಹೇಳಿಕೆ.  

ಗನ್ ಹೋರಾಟದ ಬಳಿಕ ಸ್ಥಳದಲ್ಲಿ 300 ಕಿಲೋ ಮಾಂಸ ಸಿಕ್ಕಿದ್ದಾಗಿಯೂ, ಮೊಕದ್ದಮೆಗೆ ಇನ್ನೂ ಆರು ಜನ ಸಂಬಂಧಿಸಿದ್ದಾರೆ ಎಂದೂ ಪೋಲೀಸರು ತಿಳಿಸಿದ್ದಾರೆ.

ಆದರೆ ಹೈದರ್ ಕುಟುಂಬವು ಪೊಲೀಸರ ಹೇಳಿಕೆಯನ್ನು ಅಲ್ಲಗಳೆಯಿತು.

“ನನ್ನ ಗಂಡ ಎರಡು ಗನ್ ಪರವಾನಗಿ ಹೊಂದಿರುವವರು; 40 ಬಿಗಾ ಜಮೀನುದಾರರು. ಹಾಗಿರುವಾಗ ನಾವು ಯಾಕೆ ನಾಡ ಪಿಸ್ತೂಲು ಹೊಂದಿರಬೇಕು?” ಎಂದು ಆಫ್ರೋಝ್ ಪ್ರಶ್ನಿಸುತ್ತಾರೆ.

ಇನ್ಸ್’ಪೆಕ್ಟರ್ ಗಳಾದ ಓಂವೀರ್, ಯಶಪಾಲ್ ಸಿಂಗ್ ಅಸ್ಗರ್ ಆಲಿ, ಹೆಡ್ ಕಾನ್ಸ್’ಸ್ಟೆಬಲ್ ಗಳಾದ ಸುಖ್ಪಾಲ್ ಸಿಂಗ್, ಕುನ್ವರ್ ಭರತ್, ಪ್ರಮೋದ್ ಕುಮಾರ್, ಮತ್ತು ವಿಪಿನ್, ಪೊಲೀಸ್ ಪೇದೆಗಳಾದ ರಾಜ್ವೀರ್ ಸಿಂಗ್, ದೇವೇಂದ್ರ, ನೀತು ಯಾದವ್, ಅಂಕಿತ್ ಕುಮಾರ್ ಮತ್ತು ಬೃಜೇಶ್ ಕುಮಾರ್ ಮೇಲೆ ಮೊಕದ್ದಮೆ ದಾಖಲಿಸಲು ಮ್ಯಾಜಿಸ್ಟ್ರೇಟ್ ಸೂಚನೆ ನೀಡಿದೆ.

“ಸಂಪೂರ್ಣ ಪ್ರಕರಣದ ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ದೇಹತ್’ನ ಸೂಪರಿನ್ ಟೆಂಡೆಂಟ್ ಆಫ್ ಪೋಲೀಸ್ ಸೂರಜ್ ರಾಯ್ ತಿಳಿಸಿದ್ದಾರೆ. 



Join Whatsapp