ಎತ್ತಿನಹೊಳೆಯಿಂದ ನೀರು ಎತ್ತಿಯೇ ತೀರುತ್ತೇವೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಶೀಘ್ರದಲ್ಲಿಯೇ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಸಭೆಗೆ ಇಂದು ತಿಳಿಸಿದರು. ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ ಅವರು ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯದ ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆಗಳ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಜಲ ಸಂಪನ್ಮೂಲ ಸಚಿವರು ನೀಡಿದ ಉತ್ತರಕ್ಕೆ ಧ್ವನಿಗೂಡಿಸಿ ಎತ್ತಿನಹೊಳೆಯಿಂದ ನೀರು ಎತ್ತಿಯೇ ತೀರುತ್ತೇವೆ ಎಂದು ತಿಳಿಸಿದರು.

- Advertisement -


ಇತ್ತೀಚೆಗೆ ತಾವು ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿಕೊಟ್ಟು, ಭೂಸ್ವಾಧೀನವೂ ಸೇರಿದಂತೆ, ಯೋಜನೆಯ ಅಡ್ಡಿ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮಕೈಗೊಂಡು ಪರಿಹರಿಸಲು ಮಾಡಿದ ಪ್ರಯತ್ನ ಫಲವಾಗಿ ಎರಡು ಬಹುದೊಡ್ಡ ಅಡ್ಡಿ ಅಡೆತಡೆಗಳು ನಿವಾರಣೆಯಾಗಿದ್ದು, ಒಂದೆರಡು ತಿಂಗಳಲ್ಲಿ ಎತ್ತಿನಹೊಳೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.


ಎತ್ತಿನಹೊಳೆಯಂತಹ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಗೆ ಇರುವ ಅಡ್ಡಿ ಆತಂಕ ಪರಿಹರಿಸಿ ತಕ್ಷಣ ಕ್ರಮಕೈಗೊಳ್ಳಲು ಕಾರ್ಯಪ್ರವೃತ್ತವಾಗಿದ್ದು, ಆದಷ್ಟು ಬೇಗ ಫಲಿತಾಂಶ ನಿಮ್ಮ ಕಣ್ಣಿಗೆ ಕಾಣಿಸಲಿದೆ ಎಂದು ಸಚಿವರು ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆಗೆ 195 ಕೋಟಿ ರೂ. ಹಣ ಒದಗಿಸಲಾಗಿದ್ದರೂ, ಕೆಲವು ಅಧಿಕಾರಿಗಳು ರೈತರಿಗೆ ಹಣವಿಲ್ಲವೆಂದು ಹೇಳುತ್ತಿದ್ದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಪ್ರಕರಣಗಳಲ್ಲಿ ರೈತರಿಗೆ ಹಣಪಾವತಿ ಮಾಡುವುದು ವಿಳಂಬವಾದಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಲಾಗುವುದು ಎಂದು ಸಚಿವರು ವಿವರಿಸಿದರು.

- Advertisement -

ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ರೈತರ 5078 ಎಕರೆ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಏಕರೂಪದ ದರ ನಿಗದಿಪಡಿಸುವಲ್ಲಿ ಸಮಸ್ಯೆಗಳಿದ್ದು, ಈ ಸಮಸ್ಯೆ ಪರಿಹಾರಕ್ಕೆ 2018, ಅಕ್ಟೊಭರ್ 11ರಂದು ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಜಿ. ಪರಮೇಶ್ವರ ಅವರ ನೇತೃತ್ವದ ಸಚಿವ ಸಂಪುಟದ ಉಪಸಮಿತಿ-ಸಭೆ ನಡೆದಿದ್ದರೂ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲಾಗಲಿಲ್ಲ; ಈಗ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ವಿವರವಾದ ಉತ್ತರ ನೀಡಿದರು.
ಎತ್ತಿನಹೊಳೆ ಯೋಜನೆಯ ಅನುಷ್ಠಾನದಲ್ಲಿ ಸಣ್ಣ-ಪುಟ್ಟ ಅಡ್ಡಿಗಳನ್ನು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇರಿಸುವುದಾಗಿ, ಆದಷ್ಟು ಬೇಗ ಯೋಜನೆ ಸಾಕಾರಗೊಳಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.

Join Whatsapp