ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ 5 ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಾದ್ಯಂತ ರಕ್ತದಾನ ಶಿಬಿರ

Prasthutha|

ಸಾಮಾಜಿಕ ಜಾಲತಾಣಗಳ ಮೂಲಕ ಅನಿವಾಸಿ ಭಾರತೀಯ ಗೆಳೆಯರಿಂದ ಸ್ಥಾಪಿಸಲ್ಪಟ್ಟ ‘ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ’ ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ವಿವಿಧ ನಗರಗಳ 20 ರಕ್ತ ನಿಧಿಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿದೆ. ಕೋವಿಡ್ – 19 ಸಂದಿಗ್ಧ ಪರಿಸ್ಥಿತಿ ಹಾಗೂ ರೋಗ ನಿರ್ಮೂಲನೆ ಮಾಡಲು ರಾಷ್ಟ್ರೀಯ ಸುರಕ್ಷತೆಗಾಗಿ ನಡೆಯುತ್ತಿರುವ ಲಸಿಕಾ ಅಭಿಯಾನದಿಂದಾಗಿ ರಕ್ತ ನಿಧಿಗಳಲ್ಲಿ ರೋಗಿಗಳಿಗೆ ರಕ್ತದ ಅಭಾವವನ್ನು ಮನಗಂಡು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ 5 ನೇ ವಾರ್ಷಿಕೋತ್ಸವದ ಅಂಗವಾಗಿ ಸುಮಾರು ರಾಜ್ಯದ ಇಪ್ಪತ್ತು ಕಡೆಗಳಲ್ಲಿ ಶಿಬಿರಾ ಕಾರ್ಯಕ್ರಮವನ್ನು ಆಯೊಜಿಸಿದೆ.

- Advertisement -

ಸುಮಾರು ಐದು ವರ್ಷಗಳಲ್ಲಿ 11976 ಯೂನಿಟ್ ರಕ್ತ ಸಂಗ್ರಹಿಸಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯು ಈ ವರೆಗೆ 158 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆ ಮೂಲಕ 9859 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದು ಹಾಗೂ ತುರ್ತು ಸಂದರ್ಭಗಳಲ್ಲಿ ನೇರವಾಗಿ ರಕ್ತನಿಧಿಗಳಿಗೆ 2117 ರಕ್ತದಾನಿಗಳನ್ನು ಪೂರೈಸುವ ಮೂಲಕ ಒಟ್ಟು 11976 ಯೂನಿಟ್ ರಕ್ತವನ್ನು ರಕ್ತನಿಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.ಒಂದೇ ತಿಂಗಳಿನಲ್ಲಿ ಗರಿಷ್ಟ 8 ರಕ್ತದಾನ ಶಿಬಿರಗಳನ್ನು ಹಾಗೂ ಒಂದೇ ದಿನದಲ್ಲಿ ಗರಿಷ್ಟ 3 ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಕೀರ್ತಿಯನ್ನು ಕೂಡಾ ತನ್ನದಾಗಿಸಿ ಕೊಂಡಿದೆ.ದಿನನಿತ್ಯ ಸರಾಸರಿ 20 ರಿಂದ 30 ಯೂನಿಟ್ ರಕ್ತವನ್ನು ರೋಗಿಗಳಿಗೆ ಪೂರೈಸುತ್ತಿದೆ.ಅಲ್ಲದೇ ಪ್ರತಿನಿತ್ಯ ಆವಶ್ಯವಿರುವ ತಾಜಾ ರಕ್ತಗಳ ತುರ್ತು ಮನವಿಯನ್ನು ಕೂಡಾ ಸ್ವೀಕರಿಸಿ ದಾನಿಗಳನ್ನು ಹುಡುಕಿ ಅಗತ್ಯವಿರುವ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಪೂರೈಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ.COVID – 19 ತುರ್ತು ಸಮಯದಲ್ಲಿ 700 ಕ್ಕೂ ಅಧಿಕ ರಕ್ತದಾನಿಗಳನ್ನು ನೇರವಾಗಿ ರಕ್ತನಿಧಿಗಳಿಗೆ ಪೂರೈಸಿ ಕೊರೋನಾ ಭೀತಿಯ ನಡುವೆಯೂ ತುರ್ತು ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ರಕ್ತದಾನಿಗಳನ್ನು ಪೂರೈಕೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ.

ಇದೇ ಬರುವ ದಿನಾಂಕ 08 ಆಗಸ್ಟ್ 2021ರ ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರ ವರೆಗೆ ಬೆಂಗಳೂರಿನ ಹೆಣ್ಣೂರಿನ ಲಯನ್ಸ್ ರಕ್ತ ನಿಧಿ ಜೆ.ಪಿ ನಗರ , ಲಯನ್ಸ್ ರಕ್ತ ನಿಧಿ ಸಂಜಯನಗರ , ಮೈಸೂರಿನ ಲಯನ್ಸ್ ಜೀವಾಧಾರ ರಕ್ತ ನಿಧಿ ಸಯ್ಯಾಜಿ ರಾವ್ ರೋಡ್ , ಮಡಿಕೇರಿಯ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರ, ಹಾಸನದ ಹಾಸನ ರಕ್ತ ನಿಧಿ ಕೇಂದ್ರ, ಬಿಜಾಪುರದ ಡಾ| ಗೌಡರ್ಸ್ ರಕ್ತ ನಿಧಿ, ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆ ರಕ್ತನಿಧಿ, ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ, ಮಂಗಳೂರಿನ ಯೆನೆಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ, ಕೆ.ಎಸ್ ಹೆಗ್ಡೆ ರಕ್ತನಿಧಿ ದೇರಳಕಟ್ಟೆ, ಕಣಚೂರು ಆಸ್ಪತ್ರೆ ರಕ್ತನಿಧಿ ನಾಟೆಕಲ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ, ಎ.ಜೆ ಆಸ್ಪತ್ರೆ ರಕ್ತನಿಧಿ, ವೆನ್ಲಾಕ್ ಜಿಲ್ಲಾಸ್ಪತ್ರೆ ರಕ್ತನಿಧಿ, ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿ ಜ್ಯೋತಿ, ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಕಂಕನಾಡಿ, ತೇಜಸ್ವಿನಿ ಆಸ್ಪತ್ರೆ ಲಯನ್ಸ್ ರಕ್ತನಿಧಿ, ಶ್ರೀನಿವಾಸ್ ಆಸ್ಪತ್ರೆ ರಕ್ತನಿಧಿ ಮುಕ್ಕ ಸುರತ್ಕಲ್ ಮತ್ತು ಅಂತರಾಜ್ಯ ಕೇರಳದ ಕಾಸರಗೋಡು ಬ್ಲಡ್ ಬ್ಯಾಂಕ್ ನಲ್ಲಿ ಒಟ್ಟು 20 ಕಡೆ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಕ್ತದಾನ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿಕೊಂಡಿದ್ದಾರೆ.

Join Whatsapp