ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸ್ಫೋಟ 6 ಮಂದಿಗೆ ಗಾಯ

Prasthutha|

ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಎರಡನೇ ಟರ್ಮಿನಲ್ ನ ರಸ್ತೆ ವಿಸ್ತರಣೆಯ ಕಾಮಗಾರಿ ಸ್ಥಳದಲ್ಲಿ ಸ್ಫೋಟ ಸಂಭವಿಸಿ 6 ಮಂದಿ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

- Advertisement -

ಗಾಯಗೊಂಡ ಕೂಲಿ ಕೆಲಸಗಾರರಾದ ಅವಿನಾಶ್, ಪ್ರಶಾಂತ್, ಗೌತಮ್, ಸಿರಾಜ್, ಅಜಯ್‌ಕುಮಾರ್ ಹಾಗೂ ನಾಗೇಶ್ ರಾವ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಸಿರಾಜ್ ಹಾಗೂ ಅವಿನಾಶ್ ಅವರ ದೇಹದ ಶೇ 40ರಷ್ಟು ಭಾಗ ಸುಟ್ಟಿದ್ದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ, ನಿಲ್ದಾಣ ವ್ಯಾಪ್ತಿಯ ಜಾಗದಲ್ಲಿ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು. ಕೆಳ ಸೇತುವೆಯಲ್ಲೇ ಬಣ್ಣ, ರಾಸಾಯನಿಕ ಡಬ್ಬಿ ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು.ಕಾಮಗಾರಿಯಲ್ಲಿ ತೊಡಗಿದ್ದ ಕೆಲಸಗಾರರು ನಿನ್ನೆ ಸಂಜೆ ಕೆಳ ಸೇತುವೆಯಲ್ಲಿ ಸೇರಿದ್ದರು.ರಸ್ತೆಗೆ ಬಳಿಯಬೇಕಾದ ಬಣ್ಣಗಳನ್ನು ಕೆಲ ರಾಸಾಯನಿಕಗಳನ್ನು ಬೆರೆಸಿ ಸಿಲಿಂಡರ್ ಮೂಲಕ ಕಾರ್ಮಿಕರು ಕಾಯಿಸುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಕೆಳ ಸೇತುವೆ ಆವರಿಸಿದೆ.

- Advertisement -

ಬೆಂಕಿ ಹಾಗೂ ಕೆಲಸಗಾರರು ರಕ್ಷಣೆಗಾಗಿ ಕೂಗಾಡುತ್ತಿದ್ದ ಶಬ್ದ ಕೇಳಿ ಕೂಡಲೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.ಎರಡನೇ ಟರ್ಮಿನಲ್ ಕಾಮಗಾರಿ ಆರಂಭವಾಗಿ 3–4 ವರ್ಷವಾಗಿದ್ದು, ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ.ದೇವನಹಳ್ಳಿ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp