ಅಪ್ಪು ಅವರ ಕೊನೆಯ ಚಿತ್ರ ಪ್ರದರ್ಶನಕ್ಕೆ ಬಿಜೆಪಿಯವರಿಂದ ತೊಂದರೆ: ಡಿ.ಕೆ.ಶಿವಕುಮಾರ್ ಗರಂ

Prasthutha|

ದೇವಸ್ಥಾನದ ಜಾತ್ರೆಯಲ್ಲಿ ಅಂಗಡಿ ಹಾಕಬಾರದು ಎಂದಾದರೆ ಏನಿದು?

- Advertisement -

ಕಲಬುರಗಿ: ಪುನೀತ್ ರಾಜಕುಮಾರ್ ಅವರ ಕೊನೆ ಚಿತ್ರ ಜೇಮ್ಸ್ ಅನ್ನು ಚಿತ್ರಮಂದಿರದಿಂದ ತೆಗೆಯಬಾರದು. ಅದನ್ನು ತೆಗೆಯುವಂತೆ ಒತ್ತಡ ಹಾಕುತ್ತಿರುವ ಬಿಜೆಪಿ ಶಾಸಕರ ನಡೆ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಹಲವು ಚಿತ್ರ ಮಂದಿರಗಳ ಮಾಲೀಕರು ಕರೆ ಮಾಡಿದ್ದರು. ಅಪ್ಪು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನನ್ನ ಆತ್ಮೀಯ. ದೇಶದ ಇತಿಹಾಸದಲ್ಲಿ ಅಪಾರ ಜನರಿಂದ ಗೌರವ ಸಂಪಾದಿಸಿದವರು. ಅವರ ಕೊನೆಯ ಚಿತ್ರಕ್ಕೆ ತೊಂದರೆ ನೀಡಲಾಗುತ್ತಿದೆ. ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು. ಆದರೆ ಅದು ಕಾಣುತ್ತಿಲ್ಲ ಎಂದರು.

ಬೆಂಗಳೂರಿನ ಬಿಜೆಪಿ ಶಾಸಕರು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುವಂತೆ ಕರೆ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಯಾವುದೇ ರೀತಿಯ ಪ್ರಚಾರ ಮಾದಿಕೊಳ್ಳಲಿ. ಅವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಚಿತ್ರಕಥೆ ಮಾಡಿ ಸಿನಿಮಾ ಮಾಡಿದ್ದಾರೆ. ಮಹಾತ್ಮಾಗಾಂಧಿ, ಇಂದಿರಾಗಾಂಧಿ ಹತ್ಯೆಗಿಂತಲೂ ಚಿತ್ರಕಥೆ ಬೇಕಾ? ಅವರು ವಾಸ್ತವಾಂಶ ಬಿಟ್ಟು ಏನು ಮಾಡುತ್ತಾರೋ ಮಾಡಲಿ, ಅದು ಅವರ ಪಕ್ಷದ ಅಜೆಂಡಾ. ಆ ಚಿತ್ರ ತಯಾರಕರನ್ನು ಕರೆದು ಸನ್ಮಾನ ಮಾಡಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಅದರ ಅಗತ್ಯ ಏನಿತ್ತು? ಅವರು ನಮ್ಮನ್ನು ವಿರೋಧಿಗಳು ಎಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ.

- Advertisement -

ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ಹಕ್ಕನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಾವುದೇ ಚಿತ್ರಮಂದಿರದಿಂದ ತೆಗೆದುಹಾಕಬಾರದು. ಅವರು ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಬಿಜೆಪಿ ಶಾಸಕರ ಈ ನಡೆ ಖಂಡನೀಯ ಎಂದು ಶಿವಕುಮಾರ್ ಹೇಳಿದರು.

ಶಿವರಾಜಕುಮಾರ್ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮುಖ್ಯಮಂತ್ರಿಗಳು ಕರೆ ಮಾಡಿಸಿದ್ದರು. ಆದರೂ ಪರ್ವಾಗಿಲ್ಲ. ನಾವು ನಮ್ಮ ನಾಡಿನ ನೀರಿಗಾಗಿ ಹೋರಾಟ ಮಾಡಿದ್ದೇವೆ.’

ಜಾತ್ರೆಗಳಲ್ಲಿ ಮುಸಲ್ಮಾನರಿಗೆ ಅವಕಾಶ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜನರಿಗೆ ಕೆಲಸ, ಉದ್ಯೋಗ ಕೊಟ್ಟು ಅವರ ಹೊಟ್ಟೆ ತುಂಬಿಸುವ ಯಾವುದೇ ಯೋಜನೆಯನ್ನು ಬಿಜೆಪಿ ಮಾಡಿಲ್ಲ. ಅವರು ಕೇವಲ ಭಾವನಾತ್ಮಕ ವಿಚಾರದಲ್ಲಿ ಚುನಾವಣೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಸಾಕಷ್ಟು ವಿಚಾರಗಳನ್ನು ಅವರು ತರುತ್ತಾರೆ. ಜನಕ್ಕೆ ಉದ್ಯೋಗ, ರಾಗಿ, ಭತ್ತ, ಜೋಳಕ್ಕೆ ಬೆಂಬಲ ಬೆಲೆ ನೀಡಲಿ. ಅದನ್ನು ಹೊರತು ಪಡಿಸಿ ಮಿಕ್ಕಿದ್ದನ್ನು ಮಾಡುತ್ತಾರೆ.

ಕೋವಿಡ್ ಸಮಯದಲ್ಲಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾಗ ಇವರು ಬೆಳೆ ಕಿತ್ತು ಮಾರುಕಟ್ಟೆಗೆ ಹಾಕಿದ್ದರು. ಒಂದೊಂದು ಸಮುದಾಯದ ಜನ ತಮ್ಮ ವೃತ್ತಿ ಮಾಡಿಕೊಂಡು ಬಂದಿದ್ದಾರೆ. ಜಾತ್ರೆ ಸಮಯದಲ್ಲಿ ಸಣ್ಣಪುಟ್ಟ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ದೇವಸ್ಥಾನದಲ್ಲಿ ಅವರು ಅಂಗಡಿ ಹಾಕಬಾರದು ಎಂದಾದರೆ ಏನಿದು? ಮಸೀದಿ ಹಾಗೂ ಚರ್ಚ್ ಮುಂದೆ ಯಾರೂ ಅಂಗಡಿ ಇಟ್ಟು ವ್ಯಾಪಾರ ಮಾಡಬಾರದೆ? ಕೆಲವು ಹುಡುಗರ ವಿರುದ್ಧದ ಪ್ರಕರಣಕ್ಕೂ ಇದಕ್ಕೂ ಏನು ಸಂಬಂಧ? ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಅವನ್ಯಾರೋ ಬಿಜೆಪಿ ಸಂಸದ ಅವರನ್ನು ಪಂಚರ್ ಹಾಕೋರು ಎಂದಿದ್ದ. ಅವರು ಪಂಚರ್ ಹಾಕದಿದ್ದರೆ ನಿಮ್ಮ ಗಾಡಿ ಮುಂದಕ್ಕೆ ಹೋಗುವುದೇಗೆ?’ ಎಂದು ಕುಟುಕಿದರು.



Join Whatsapp