ಬಿಜೆಪಿಯವರ ನಡೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ: ಯು.ಟಿ.ಖಾದರ್

Prasthutha|

ಮಂಗಳೂರು: ಸಮಾಜ ಘಾತಕ ಶಕ್ತಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದಿರುವುದು ಪ್ರಜಾಪ್ರಭುತ್ವದ ವಿರುದ್ಧದ ದಬ್ಬಾಳಿಕೆಯಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುವುದಾಗಿ  ಮಾಜಿ ಮಂತ್ರಿ ಯು. ಟಿ. ಖಾದರ್ ಹೇಳಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದಾಳಿ, ಮೊಟ್ಟೆ ಎಸೆತವು ಬಿಜೆಪಿ ಸರಕಾರ ಪ್ರಚೋದಕ ದಾಳಿಯಾಗಿದೆ. ಛಾಯಾ ಮುಖ್ಯಮಂತ್ರಿ ಎನ್ನಬಹುದಾದ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಳೆ ಹಾನಿ ಪರಿಶೀಲನೆಗೆ ಹೋಗಿದ್ದರು. ಬಿಜೆಪಿಯವರ ನಡೆಯು ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಆಗಿದೆ. ಬಿಜೆಪಿಯವರ ಇಂತಹ ಕೀಳು ದಾಳಿಯು ನಾವು ಇನ್ನಷ್ಟು ಗಟ್ಟಿಯಾಗಿ ಇವನ್ನೆಲ್ಲ ಪ್ರತಿಭಟಿಸಲು ಸಾಧ್ಯವಾಗಿಸಿದೆ ಎಂದು ಯುಟಿಕೆ ಹೇಳಿದರು.

ರಾಜ್ಯ ಸರಕಾರವು ಇದಕ್ಕೆ ನೇರ ಜವಾಬ್ದಾರಿ. ರಾಜ್ಯದ ಪೊಲೀಸ್ ಇಲಾಖೆಯು ಬಿಜೆಪಿ ಕೈಗೊಂಬೆಯಾಗಿದೆ.  ಪ್ರತಿ ಪಕ್ಷದ ನಾಯಕರು ಬರುವಾಗ ಪೊಲೀಸರು ಅಲ್ಲಿದ್ದ ಇಪ್ಪತ್ತು ಜನರನ್ನು ಚೆದುರಿಸಲು ಆಗಲಿಲ್ಲ ಏಕೆ? ಕಾಂಗ್ರೆಸ್ ಪ್ರತಿಭಟಿಸಿದ ಮೇಲೆಯೇ ಪೊಲೀಸರು ಕ್ರಮಕ್ಕೆ ಮುಂದಾದರು. ಕೋಮುವಾದಿಗಳ ಕೈಗೆ ಸರಕಾರ ಒಪ್ಪಿಸಿ ಜನರತ್ತ ನಿರ್ಲಕ್ಷ್ಯ ಈ ಸರಕಾರದ ನೀತಿಯೇ ಎಂದು ಖಾದರ್ ಪ್ರಶ್ನಿಸಿದರು.

- Advertisement -

ಫ್ಲೆಕ್ಸ್, ಬ್ಯಾನರ್ ಯಾರು ಹಾಕಿದರೂ ಅದನ್ನು ತೆಗೆಸುವ ಅಗತ್ಯವಿಲ್ಲ. ಆದರೆ ಬ್ಯಾನರ್ ಹಾಕುವ ಉದ್ದೇಶ ಸದುದ್ದೇಶದ್ದಾಗಿರಬೇಕು. ತಪ್ಪು ಉದ್ದೇಶದಿಂದ ಹಾಕುವುದು ಸರಿಯಲ್ಲ ಎಂದು ಅವರು ಹೇಳಿದರು.

ನಮ್ಮ ಪಕ್ಷ ಅಸಹಿಷ್ಣುತೆ ಪಕ್ಷ ಅಲ್ಲ. ಅಂಡಮಾನ್ ಜೈಲಿನಲ್ಲಿ ಸಾವಿರಾರು ಜನ ಸಾವರ್ಕರ್ ರಂತೆ ಇದ್ದರು. ಅವರೆಲ್ಲ ನೇಣಿಗೇರಿದರು. ಸಾವರ್ಕರ್ ಕ್ಷಮಾಪಣೆ ಪತ್ರ ಬರೆದು ಹೊರಗೆ ಬಂದರು. ಅನಂತರ ಅವರು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ನೆಹರೂರು ಜೈಲಿನಲ್ಲಿ ಇದ್ದಾಗ ಹೊರ ಬಾರದೆ ಬಂದು ನೋಡಲಾಗದು ಎಂದು ಹೆಂಡತಿಗೆ ಕ್ಷಮಾಪಣೆ ಪತ್ರ ಬರೆದರು. ಇದು ನೆಹರೂ, ಸಾವರ್ಕರ್ ರಿಗೆ ಇರುವ ವ್ಯತ್ಯಾಸ ಎಂದು ಖಾದರ್ ಹೇಳಿದರು. ರಾಜ್ಯದ ಜನರಿಗೆ ನೆಮ್ಮದಿ ಬೇಕೆಂದರೆ ಬಿಜೆಪಿ ಸರಕಾರ ಕಿತ್ತೊಗೆಯುವುದೊಂದೇ ದಾರಿ ಎಂದು ಖಾದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಲ್ಲಾಳ್, ಚಂದ್ರಿಕಾ ರೈ, ಅಜೀಜ್, ಸಂತೋಷ್ ಶೆಟ್ಟಿ, ದೀಪಕ್, ಫಾರೂಕ್, ದೇವಣ್ಣ ಮೊದಲಾದವರು ಉಪಸ್ಥಿತರಿದ್ದರು.



Join Whatsapp