►ಡಬಲ್ ಇಂಜಿನ್ ಅಲ್ಲ, ಬಿಜೆಪಿಯದ್ದು ಸೈಲೆನ್ಸರ್ ಸರಕಾರ: ಸದ್ದು ಮಾತ್ರ, ಕೆಲಸ ನಡೆಯಲ್ಲ
ಮಂಗಳೂರು: ಬಿಜೆಪಿಯವರು ತಮ್ಮ ಭ್ರಷ್ಟಾಚಾರ ಮರೆಮಾಚಲು ಬೇಕಾಗಿ ಯಾತ್ರೆ ಮಾಡುತ್ತಿದ್ದಾರೆ. ಇದು ಜನಸಂಕಲ್ಪ ಯಾತ್ರೆಯಲ್ಲ, ಜನಸಂಕಷ್ಟ ಯಾತ್ರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಜನರು ಯಾವತ್ತೂ ಬಿಜೆಪಿಗೆ ಅಧಿಕಾರ ಕೊಟ್ಟಿಲ್ಲ, ಬಿಜೆಪಿಯವರೇ ಆಪರೇಷನ್ ಕಮಲದ ಮೂಲಕ ಅದನ್ನು ಕಿತ್ತುಕೊಂಡಿದ್ದಾರೆ. ಅಸಾಂವಿಧಾನಿಕ ಮಾರ್ಗದಿಂದ ಅಧಿಕಾರಕ್ಕೆ ಬಂದವರು ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಕಿಡಿಕಾರಿದರು.
ಡಬಲ್ ಇಂಜಿನ್ ಸರಕಾರ ಬಂದರೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಡಬಲ್ ಇಂಜಿನ್ ಸರಕಾರಕ್ಕೆ ಕಡೇ ಪಕ್ಷ ರಸ್ತೆಯ ಗುಂಡಿಯನ್ನೂ ಮುಚ್ಚಲು ಸಾಧ್ಯವಾಗುತ್ತಿಲ್ಲ. ಇದು ಡಬಲ್ ಇಂಜಿನ್ ಸರಕಾರ ಅಲ್ಲ ‘ಸೈಲೆನ್ಸರ್ ಸರಕಾರ’. ಕೇವಲ ಸದ್ದು ಮಾಡುತ್ತಿದೆಯೇ ವಿನಃ ಏನೂ ಕೆಲಸ ನಡೆಯುತ್ತಿಲ್ಲ ಎಂದು ಖಾದರ್ ವ್ಯಂಗ್ಯವಾಡಿದರು.
ತನ್ನ ಕ್ಷೇತ್ರದ ರಸ್ತೆ ದುರಸ್ತಿಗೆ ಸರಕಾರ ನೀಡಿದ ಅನುದಾನದ ಬಗ್ಗೆ ಮಾತನಾಡಿದ ಖಾದರ್, ಗುಂಡಿ ಮುಚ್ಚಲು ಅಂದಾಜು 50 ಲಕ್ಷವಾದರೂ ಬೇಕು. ಆದರೆ ಸರಕಾರ ಕೇವಲ 5 ಲಕ್ಷ ಕೊಟ್ಟು ಕೈತೊಳೆದುಕೊಂಡಿದೆ. ರಸ್ತೆ ಗುಂಡಿ ಮುಚ್ಚಲು ಅನುದಾನ ನೀಡಲು ಸಾಧ್ಯವಾಗದವರು ಇನ್ನೇನು ನೀಡಿಯಾರು ಎಂದು ಪ್ರಶ್ನಿಸಿದ ಅವರು, ಕೆಲಸ ಪ್ರಾರಂಭ ಮಾಡಲು ಹೇಳಿದ್ದೇನೆ. ಒಟ್ಟು ಎಷ್ಟು ಮೊತ್ತವಾಗುತ್ತೋ ಗೊತ್ತಿಲ್ಲ. ಅವರು ಅನುದಾನ ಕೊಟ್ಟರೂ ಕೊಡದಿದ್ದರೂ ನಾನು ಶಾಸಕರ ನಿಧಿಯಿಂದ ಹಣ ಮಂಜೂರು ಮಾಡುತ್ತೇನೆ ಎಂದು ಹೇಳಿದರು.
ದ.ಕ.ಜಿಲ್ಲೆಗೆ ಬಿಜೆಪಿ ಏನೂ ಮಾಡಲಿಲ್ಲ:
ಮೀನುಗಾರರಿಗೆ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಸರಕಾರ ಭರವಸೆ ನೀಡಿತ್ತು, ಆದರೆ ಇದುವರೆಗೆ ಅದು ಕೂಡ ಈಡೇರಿಲ್ಲ. ಕಾರ್ಮಿಕರಿಗೆ ಮನೆಕಟ್ಟಲು 5 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು ಅದು ಕೂಡ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಸರಕಾರ ಮೀನುಗಾರರ ಮುಗ್ಧತೆಯ ಲಾಭ ಪಡೆಯುತ್ತಿದೇ ವಿನ: ದ.ಕ ಜಿಲ್ಲೆಯ ಜನರಿಗಾಗಿ ಬಿಜೆಪಿ ಏನೂ ಮಾಡಲಿಲ್ಲ ಎಂದು ಆರೋಪಿಸಿದರು.
ಕುಚಲಕ್ಕಿ ತರುತ್ತೇವೆ ಎಂಬುದು ಬಿಜೆಪಿಯ ಸುಳ್ಳು ಭರವಸೆ:
ಕುಚಲಕ್ಕಿ ತರುತ್ತೇವೆ ಎಂದು ಕಳೆದ 3 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಲಕ್ಷ ದೀಪಕ್ಕೆ ಕುಚಲಕ್ಕಿ ರಫ್ತು ಮಾಡುವ ಬಿಜೆಪಿ ಸರಕಾರಕ್ಕೆ ದ.ಕ ಜಿಲ್ಲೆಗೆ ತರಲು ಇಷ್ಟು ವರ್ಷ ಬೇಕಾ? ನಮ್ಮಿಂದ ಸಾಧ್ಯವಿಲ್ಲ ಎಂದು ಸತ್ಯವನ್ನು ಹೇಳಲಿ, ಅದು ಬಿಟ್ಟು ಜನರಿಗೆ ಸುಳ್ಳು ಭರವಸೆ ಯಾಕೆ ನೀಡಬೇಕು?. ನಾವು ಮಾಡಿದ ಪಡಿತರ ವ್ಯವಸ್ಥೆಯನ್ನು ಬಿಜೆಪಿಯವರು ಹಾಳುಮಾಡಿಬಿಟ್ಟರು. ಜನರಿಗೆ ರೇಷನ್ ಇಲ್ಲ. ಯುನಿವರ್ಸಿಟಿಯಲ್ಲಿ ಸರಿಯಾಗಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿಲ್ಲ. ಬಿಜೆಪಿಯಿಂದಾಗಿ ಎಲ್ಲಾ ಮನೆಯಲ್ಲೂ ಸಂಕಷ್ಟ ಉಂಟಾಗಿದೆ ಎಂದು ಕಿಡಿಕಾರಿದರು.
ಜಾರಕಿಹೊಳಿಯದ್ದು ವೈಯಕ್ತಿಯ ಅಭಿಪ್ರಾಯ:
ಸತೀಶ್ ಜಾರಕಿಹೊಳಿ ಹಿಂದೂ ಪದವನ್ನು ಅಶ್ಲೀಲ ಎಂದು ಹೇಳಿದ್ದಾರೆ ಇದಕ್ಕೆ ಕಾಂಗ್ರೆಸ್ಸಿನ ನಿಲುವೇನು ಎಂಬ ಪತ್ರಕರ್ತರ ಪ್ರಶ್ನೆಗೆ, ಅದು ಅವರ ವೈಯಕ್ತಿಯ ಅಭಿಪ್ರಾಯ, ಅದನ್ನು ಅವರು ಯಾವುದೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದಲ್ಲ. ಅದಕ್ಕೆ ನಮ್ಮ ರಾಜ್ಯ ನಾಯಕರು ಪ್ರತಿಕ್ರಯಿಸಿದ್ದಾರೆ. ಯಾರ ಭಾವನೆಗೂ ನೋವುಂಟು ಮಾಡಬಾರದು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಖಾದರ್ ಹೇಳಿದರು.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ಬೀಫ್ ಸ್ಟಾಲ್:
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ಬೀಫ್ ಸ್ಟಾಲ್ ಗೆ ಅನುಮತಿ ನೀಡಿದ್ದು, ಅದಕ್ಕೆ ಹಿಂದುತ್ವ ಸಂಘಟನೆಗಳಿಂದ ವೀರೋಧ ಕೇಳಿ ಬರುತ್ತಿದೆಯಲ್ಲವೇ ಎಂದು ಶಾಸಕರೊಂದಿಗೆ ಪ್ರಶ್ನಿಸಿದಾಗ, ಅದಕ್ಕೆ ಕಾನೂನು ಇದೆ. ಅದೇ ರೀತಿಯಲ್ಲಿ ಅಲ್ಲಿ ನಿಯಮ ಜಾರಿಯಾಗುತ್ತದೆ. ಹೆಚ್ಚಾಗಿ ಹೇಳಲು ಅದು ನನ್ನ ಕ್ಷೇತ್ರವಲ್ಲ. ನಾನು ಕೇವಲ ಒಂದು ನಗರಕ್ಕೆ ಸೀಮಿತವಾಗಿ ಮಾತಾಡಲ್ಲ. ರಾಜ್ಯದಲ್ಲಿ 11ರಷ್ಟು ಬೀಫ್ ರಫ್ತು ಮಾಡುವ ಘಟಕಗಳಿವೆ. ಅಲ್ಲಿಂದ ಬಿಜೆಪಿಗೆ ದೇಣಿಗೆ ಬರುತ್ತದೆ. ರಾಜ್ಯ ಸರಕಾರ ಅದನ್ನು ಯಾಕೆ ನಿಷೇಧ ಮಾಡಲ್ಲ. ದೆಹಲಿಯಲ್ಲಿ ಕೂತು ಇಡೀ ದೇಶಕ್ಕೆ CAA, NRC ಇಂತಹ ಕಾನೂನುಗಳನ್ನು ತರುವಾಗ ಇಡೀ ದೇಶಕ್ಕೆ ಗೋ ಹತ್ಯೆ ವಿಚಾರದಲ್ಲಿ ಒಂದೇ ಕಾನೂನು ತರುವುದಿಲ್ಲ ಯಾಕೆ ಎಂದು ಖಾದರ್ ಪ್ರಶ್ನಿಸಿದರು.
ಗೋವುಗಳ ವಿಚಾರ ಮಾಡುವ ಬಿಜೆಪಿಯವರು ಪಶು ಸಂಗೋಪಣೆಗೆ ಕೊಟ್ಟ ಕೊಡುಗೆಯೇನು. ಪಂಜಾರಿನ ಕಪಿಲ ಗೋಶಾಲೆಯನ್ನು ಒಡೆದು ಹಾಕಿ, ಗೋವುಗಳನ್ನು ನಡುರಸ್ತೆಗೆ ಬಿಟ್ಟದ್ದು ಇದೇ ಬಿಜೆಪಿಯವರು. ಆ ಗೋಶಾಲೆಯ ಮುಖ್ಯಸ್ಥರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾಗಿತ್ತು. ಇವರು ಅವರಿಗೆ ರೌಡಿ ಪಟ್ಟ ಕಟ್ಟಿದ್ದಾರೆ. ದೇಶಾದ್ಯಂತ ಗೋವು ರಫ್ತು ಆಗುವುದನ್ನು ತಡೆಯಲು ಸಾಧ್ಯವಾಗದ ಬಿಜೆಪಿಯವರು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ವಿಷಯ ಮಾತಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.