ಹುಬ್ಬಳ್ಳಿ | ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ ಕೋರಿದ AIMIM

Prasthutha|

ಹುಬ್ಬಳ್ಳಿ: ಇತ್ತೀಚಿಗಷ್ಟೇ ಗಣೇಶ್ ಚತುರ್ಥಿ ಆಚರಣೆ ವಿಚಾರವಾಗಿ ವಿವಾದ ಉಂಟಾದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡುವಂತೆ ಕೋರಿ AIMIM ಹಾಗೂ ಕೆಲವು ದಲಿತ ಪರ ಸಂಘಟನೆಗಳು ನಗರಸಭೆಗೆ ಮನವಿ ಸಲ್ಲಿಸಿವೆ.

- Advertisement -

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡುವಂತೆ ಕೋರಿ ಕೆಲವೊಂದು ದಲಿತ ಪರ ಸಂಘಟನೆಗಳು ಮತ್ತು AIMIM ಪಕ್ಷ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಇದಾದ ಬೆನ್ನಲ್ಲೇ ಶ್ರೀರಾಮ ಸೇನೆ ಕೂಡ ರಂಗಪ್ರವೇಶ ನಡೆಸಿದ್ದು, ಕನಕದಾಸರ ಜಯಂತಿಯನ್ನು ಕೂಡ ಅಲ್ಲಿಯೇ ಆಚರಿಸಲು ಅನುಮತಿ ನೀಡುವಂತೆಯೂ ನಗರಸಭೆಗೆ ಮನವಿ ಪತ್ರ ಸಲ್ಲಿಸಿದೆ.

ಈದ್ಗಾ ಮೈದಾನದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಬಹುದು. ಆದರೆ ಯಾವುದೇ ದೊಡ್ಡ ದೊಡ್ಡ ನಾಯಕರ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಮೇಯರ್ ವೀರೇಶ್ ಅಂಚಟಗೇರಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ಇದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿಚಾರವಾಗಿದ್ದು, ಮೇಯರ್ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸುತ್ತಾರೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಗಸ್ಟ್’ನಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶ್ ಚತುರ್ಥಿ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು.

ಅಂಜುಮನ್ ಇ ಇಸ್ಲಾಮ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್, ಮೈದಾನವು ಹುಬ್ಬಳ್ಳಿ-ಧಾರವಾಡ ನಗರಸಭೆಯ ಆಸ್ತಿಯಾಗಿದ್ದು, ಅವರು ಬಯಸುವವರಿಗೆ ಭೂಮಿಯನ್ನು ಹಂಚಬಹುದು ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್’ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.

ಆದರೆ ಗಣೇಶ ಚತುರ್ಥಿ ಆಚರಣೆಗೆ ಈದ್ಗಾ ಮೈದಾನಕ್ಕೆ ಅನುಮತಿ ನೀಡಲಾಗಿದ್ದು, ವಿವಾದಿತ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಗಣೇಶ್ ಚತುರ್ಥಿ ಹಬ್ಬವನ್ನು ಆಚರಿಸಲಾಗಿತ್ತು.

ದಶಕದ ಹಳೆಯದಾದ ಹುಬ್ಬಳ್ಳಿಯ ಈದ್ಗಾ ಮೈದಾನ ಸಮಸ್ಯೆ 2010 ರಿಂದ ವಿವಾದಕ್ಕೆ ಸಿಲುಕಿಕೊಂಡಿದ್ದು, ಮೈದಾನವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿಶೇಷ ಆಸ್ತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.

1921 ರಲ್ಲಿ ಮೈದಾನವನ್ನು ಇಸ್ಲಾಮಿಕ್ ಸಂಸ್ಥೆ ಅಂಜುಮನ್-ಇ-ಇಸ್ಲಾಂಗೆ 999 ವರ್ಷಗಳ ಕಾಲ ಪ್ರಾರ್ಥನೆ ನಡೆಸಲು ಗುತ್ತಿಗೆ ನೀಡಲಾಯಿತು. ಸ್ವಾತಂತ್ರ್ಯದ ನಂತರ ಮೈದಾನ ಆವರಣದಲ್ಲಿ ಅನೇಕ ಅಂಗಡಿಗಳನ್ನು ತೆರೆಯಲಾಗಿತ್ತು.

Join Whatsapp