ಮಂಗಳೂರಿನ ‘ಸೈಕಲ್ ಫೋರ್ ಚೇಂಜ್ ಯೋಜನೆ’ ಬಿಜೆಪಿಯ ಭ್ರಷ್ಟಾಚಾರ ನಡೆಸುವ ಯೋಜನೆ: ಮನಪಾ ವಿಪಕ್ಷ ನಾಯಕ ಆರೋಪ

Prasthutha|

ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಅಧೀನದಲ್ಲಿ ಸೈಕಲ್ ಪೋರ್ ಚೇಂಜ್ ಯೋಜನೆ ಆರಂಭಿಸಲಾಗಿದ್ದು, ಈ ಯೋಜನೆ ಶಾಸಕ ವೇದವ್ಯಾಸ್ ಕಾಮತ್ ಅವರ ಹಣ ಮಾಡುವ ಯೋಜನೆ ಎಂದು ಮಂಗಳೂರು ಮಹಾ ನಗರ ಪಾಲಿಕೆ ವಿಪಕ್ಷ ನಾಯಕ ಎಸಿ ವಿನಯ್ ರಾಜ್ ಆರೋಪಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ ಜಿಲ್ಲೆಯ ವಾಣಿಜ್ಯ ಕೇಂದ್ರ ಪ್ರದೇಶಗಳನ್ನು ಅವೈಜ್ಞಾನಿಕವಾಗಿ ಕಾಮಗಾರಿ ಹೆಸರಲ್ಲಿ ಅಗೆದು ಹಾಕಲಾಗಿದ್ದು, ಸೈಕಲ್ ಪಥಕ್ಕೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲಿ ಇಲ್ಲ. ಮಂಗಳೂರು ಈಗ ಗೊಂದಲದ ಗೂಡಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಜನರಿಗೆ ಸಂಚಾರ ನಡೆಸಲು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಆದರೆ ಈ ಕಿರಿದಾದ ರಸ್ತೆಯಲ್ಲಿ ಸೈಕಲ್ ಪಥ ಮಾಡಿದರೆ ರಸ್ತೆ ಇನ್ನೂ ಕಿರಿದಾಗುತ್ತದೆ. ವ್ಯಾಪಾರ ವಹಿವಾಟಿಗೂ ಇಲ್ಲಿ ತೊಂದರೆ ಆಗಿದೆ. ಒಟ್ಟಾರೆ ಸ್ಮಾರ್ಟ್ ಸಿಟಿ ಸೈಕಲ್ ಪಥ ಯೋಜನೆ ಅಡಿ ಶಾಸಕ ಕಾಮತ್ ಹಣ ಲೂಟಿ ಮಾಡುವ ಕಾರ್ಯಕ್ಕಿಳಿದಿದ್ದು, ಈ ಮೂಲಕ ಶಾಸಕರು ಎಂಟು ಕೋಟಿ ನುಂಗುವ ಯೋಜನೆ ಹಾಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಯೋಜನೆ ಶಾಸಕರ ಹಣ ಮಾಡುವ ಯೋಜನೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮತ್ತು ವಿಮರ್ಶೆ ನಡೆಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಈ ಯೋಜನೆ ಬಗ್ಗೆ ಸರ್ಕಾರ ಶೀಘ್ರ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಗಮನಹರಿಸಿದಿದ್ದಲ್ಲಿ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ. ಜನರ ತೆರಿಗೆ ಹಣ ಪೋಲಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ವಿನಯ್ ರಾಜ್ ಎಚ್ಚರಿಕೆ ನೀಡಿದ್ದಾರೆ.

Join Whatsapp