ಉಡುಪಿ: ಬಿಜೆಪಿಗರಿಂದಲೇ ಸ್ವಪಕ್ಷದ ಕಾರ್ಯಕರ್ತನೊಬ್ಬ ಮಾರಣಾಂತಿಕ ಹಲ್ಲೆಗೊಳಗಾದ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮುದ್ದೂರು ಎಂಬಲ್ಲಿ ನಡೆದಿದೆ.
ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತ. ನೆಂಚಾರು ಹಾಲು ಡೈರಿಗೆ ಹಾಲು ನೀಡಲು ಬಂದಿದ್ದ ಪ್ರಭಾಕರ ಪೂಜಾರಿಯನ್ನು ಗುರುವಾರ ಬೆಳಗಿನ ಜಾವ 4 ಘಂಟೆಗೆ ಅಪಹರಿಸಿ ಗಂಭೀರ ಹಲ್ಲೆ ನಡೆಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಜೆಪಿ ಮುಖಂಡ ಪ್ರತಾಪ್ ಹೆಗ್ಡೆ ಅವರ ಕಚೇರಿಯಲ್ಲಿ ಸಂಜೆಯವರೆಗೂ ಕೂಡಿಹಾಕಿ ವಿದ್ಯುತ್ ತಂತಿಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಪ್ರತಾಪ್ ಹೆಗ್ಡೆ, ಹರೀಶ್, ದಿನೇಶ್ ಮತ್ತು ಗಣೇಶ್ ಎಂಬವರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರಭಾಕರ ಪೂಜಾರಿಯನ್ನು ಅವರ ಪತ್ನಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನೆರವು ನೀಡಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ.