ಸೆಪ್ಟೆಂಬರ್​ 4 ರಂದು ರಾಜ್ಯದ ಬರ ಪೀಡಿತ ತಾಲೂಕು ಘೋಷಣೆ : ಚೆಲುವರಾಯಸ್ವಾಮಿ

Prasthutha|

ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ನೀರಿಲ್ಲದೆ ಜನರು ಪರದಾಡುವಂತಾಗಿದೆ. ಜಲಾಶಯಗಳಲ್ಲೂ ನೀರಿನ ಮಟ್ಟ ಕಡಿಮೆಯಾಗಿದ್ದು, ಬೆಳೆಹಾನಿ ಆಗಿದೆ. ಈ ಹಿನ್ನೆಲೆಯಲ್ಲಿ ಸೆ.4ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಬರಪೀಡಿತ ತಾಲೂಕುಗಳನ್ನು ಘೋಷಿಸುತ್ತೇವೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

- Advertisement -

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು ತುಸು ಹೆಚ್ಚು ಕಡಿಮೆಯಾದರೂ ಸೆಪ್ಟೆಂಬರ್ ಮೊದಲ ವಾರದಲ್ಲೇ ಬರ ಪ್ರದೇಶಗಳ ಪಟ್ಟಿ ಘೋಷಿಸುತ್ತೇವೆ. ಅಲ್ಲದೆ ಬರಗಾಲ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಿದರೂ, ಬೆಳೆ ವಿಮೆ ದೊರೆತರೂ ಮಳೆ ಅಭಾವದಿಂದ ರೈತ ವರ್ಗ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೂನ್ 1 ಮತ್ತು ಆಗಸ್ಟ್ 30 ರ ನಡುವೆ ನಿರೀಕ್ಷಿತ ಸಾಮಾನ್ಯ 660 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 446 ಮಿಮೀ ಮಳೆಯಾಗಿದೆ. ಈ ಮೂಲಕ ಶೇ 26 ರಷ್ಟು ಮಳೆ ಕೊರತೆಯಾಗಿದೆ. 29 ಜಿಲ್ಲೆಗಳಲ್ಲಿ ಆಗಸ್ಟ್​​ನಲ್ಲಿ ಶೇ.70 ರಷ್ಟು ಮಳೆ ಕೊರತೆಯಾಗಿದೆ. ಸತತ ಮೂರು ವಾರಗಳಿಂದ ಮಳೆಯಾಗಿಲ್ಲ. ಇದರಿಂದ ರಾಜ್ಯದಲ್ಲಿ 82.35 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಆಗಬೇಕಿತ್ತು, ಆದರೆ ಈಗ 66.68 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ 2022ರಲ್ಲಿ ಇದೇ ಸಮಯದಲ್ಲಿ 71.74 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು ಎಂದು ತಿಳಿಸಿದರು.

- Advertisement -

ಜೂನ್ 1 ಮತ್ತು ಆಗಸ್ಟ್ 30 ರ ನಡುವೆ, ಕರ್ನಾಟಕದಲ್ಲಿ 446 ಮಿಮೀ ಮಳೆಯಾಗಿದೆ. ವಾಡಿಕೆ ಪ್ರಕಾರ 660 ಮಿಮೀ ಮಳೆಯಾಗಬೇಕಿತ್ತು. ಶೇ 26 ರಷ್ಟು ಮಳೆ ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಶೇ.70ರಷ್ಟು ಮಳೆಯಾಗಿಲ್ಲ.

120 ರಿಂದ 150 ತಾಲ್ಲೂಕುಗಳಲ್ಲಿ ಒಣ ಹವೆ ಬೀಸುತ್ತಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿದೆ. ಕರ್ನಾಟಕದ 14 ಜಲಾಶಯಗಳಲ್ಲಿ ಶೇ.60ಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ. ಬಾಗಲಕೋಟೆ, ಗದಗ, ತುಮಕೂರು, ಬೆಳಗಾವಿ ಜಿಲ್ಲೆಗಳ 194 ಗ್ರಾಮಗಳಲ್ಲಿ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ. ಸುಮಾರು 150 ತಾಲೂಕುಗಳಲ್ಲಿ ಒಣಹವೆ ಕಾಣಿಸಿಕೊಂಡು ಮಣ್ಣು ತೇವಾಂಶ ಕಳೆದುಕೊಂಡಿದೆ. ಸರ್ಕಾರವು ಜಿಲ್ಲೆಗಳಿಂದ ಮಣ್ಣಿನ ವರದಿಯನ್ನು ಪಡೆಯುತ್ತಿದೆ. ಬರಪೀಡಿತ ಪ್ರದೇಶಗಳ ಘೋಷಣೆಗೆ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಮತ್ತು ರಾಜ್ಯ ನೀಡಿರುವ ಮಾರ್ಗಸೂಚಿಗಳನ್ನು ಪರಿಗಣಿಸಲಾಗುವುದು ಎಂದರು.

ಇನ್ನು ಮಳೆ ಕೊರತೆಯಿಂದ ಆಗಿರುವ ಬೆಳೆ ಹಾನಿಯ ಪ್ರಮಾಣ ಕುರಿತು ಮಾತನಾಡಿದ ಕೃಷಿ ಸಚಿವರು, ಭೂ ಸತ್ಯಾಸತ್ಯತೆ ಪರಿಶೀಲನೆಗೆ ಸರ್ಕಾರ ಆದೇಶಿಸಿದ್ದು, ಮುಂದಿನ 10 ದಿನಗಳಲ್ಲಿ ವರದಿ ಲಭ್ಯವಾಗಲಿದೆ. ಬೆಳೆ ವಿಮೆಗೆ 16.23 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದು, 15.31 ಲಕ್ಷ ಹೆಕ್ಟೇರ್‌ನಲ್ಲಿನ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಲಾಗಿದೆ. 2022-23ರಲ್ಲಿ 12.64 ಲಕ್ಷ ರೈತರು ₹1,114 ಕೋಟಿ ಬೆಳೆ ವಿಮೆ ಪಡೆದಿದ್ದಾರೆ. 2022-23ರಲ್ಲಿ 16 ಲಕ್ಷ ರೈತರು ಮತ್ತು 2021-22ರಲ್ಲಿ 12 ಲಕ್ಷ ರೈತರು ನೋಂದಣಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರು ಎಂದು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ತಡವಾಗಿ ಆರಂಭಗೊಂಡಿದ್ದು, ಮಳೆ ಕೊರತೆಯಿಂದ ಬಿತ್ತನೆ ವಿಳಂಬವಾಗಿದ್ದರಿಂದ ಬೆಳೆ ವಿಮೆ ನೋಂದಣಿ ಕುಸಿದಿದೆ. 2023ರಲ್ಲಿ ಬಾಗಲಕೋಟೆ, ಗದಗ, ತುಮಕೂರು, ಬೆಳಗಾವಿ ಜಿಲ್ಲೆಗಳ 194 ಗ್ರಾಮಗಳಲ್ಲಿ ಬಿತ್ತನೆ ಕಾರ್ಯಗೊಂಡಿಲ್ಲ ಅಥವಾ ಬೆಳೆ ಹಾನಿಯಾಗಿದೆ. ಹೀಗಾಗಿ ಇಲ್ಲಿನ 35,209 ರೈತರು 35 ಕೋಟಿ ರೂ. ಬೆಳೆ ವಿಮೆ ಪಡೆಯಲಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೇಡಿಕೆ ಕಡಿಮೆಯಾಗಿದೆ. ಅಂಕಿಅಂಶಗಳ ಪ್ರಕಾರ, ಬೀಜಗಳಿಗೆ ಸಾಮಾನ್ಯ ಬೇಡಿಕೆ ಸುಮಾರು 5.54 ಲಕ್ಷ ಕ್ವಿಂಟಾಲ್ ಆಗಿದ್ದರೂ, ಇದುವರೆಗೆ 3.38 ಲಕ್ಷ ಕ್ವಿಂಟಾಲ್ ಬೀಜಗಳನ್ನು ವಿತರಿಸಲಾಗಿದೆ. ಆರ್​ಎಸ್​ಕೆಗಳಲ್ಲಿ ಪ್ರಸ್ತುತ 80,000 ಕ್ವಿಂಟಾಲ್ ಬೀಜಗಳು ಲಭ್ಯವಿದೆ. ಮುಂಗಾರು ಸಮಯದಲ್ಲಿ 33.21 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗುತ್ತಿತ್ತು. ಆದರೆ ಇದುವರೆಗೆ 19.90 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದೆ. 13.31 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಗೋದಾಮುಗಳಲ್ಲಿದೆ ಎಂದು ಮಾಹಿತಿ ನೀಡಿದರು.

Join Whatsapp