ಚಾಮರಾಜನಗರ ನಗರಸಭೆ ಚುನಾವಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆ ಬೇಷರತ್ ಬೆಂಬಲ ನೀಡಿದ ಎಸ್.ಡಿ.ಪಿ.ಐ: ಗೈರು ಹಾಜರಾದ ಕಾಂಗ್ರೆಸ್ ಶಾಸಕ: ಬಿಜೆಪಿ ವಶಕ್ಕೆ ನಗರಸಭೆ

Prasthutha|

►► ಕೋಮುವಾದಿಗಳಿಗೆ ನೆರವಾಗಲು ಶಾಸಕ ಪುಟ್ಟರಂಗಶೆಟ್ಟಿ ಗೈರು: ಎಸ್.ಡಿ.ಪಿ.ಐ ಆರೋಪ

- Advertisement -

ಮೈಸೂರು: ಚಾಮರಾಜನಗರ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಆರು ಮಂದಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲವನ್ನು ನೀಡಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ ಶಾಸಕರು, ಪಕ್ಷೇತರ ಅಭ್ಯರ್ಥಿಯೊಬ್ಬರ ಗೈರು ಹಾಜರಿ ಮತ್ತು ಕೊನೆಯ ಕ್ಷಣದಲ್ಲಿ ಬಿಎಸ್ಪಿ ಅಭ್ಯರ್ಥಿ ಬಿಜೆಪಿಗೆ ಮತ ನೀಡಿರುವುದರಿಂದ ನಗರಸಭೆಯು ಬಿಜೆಪಿ ವಶಕ್ಕೆ ಹೋಗಿದೆ.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಕಾಂಗ್ರೆಸ್ ಗೆ ಬೆಂಬಲವನ್ನು ನೀಡಬೇಕು ಎಂದು ಕಾಂಗ್ರೆಸ್ ನ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಎಸ್.ಡಿ.ಪಿ.ಐಯೊಂದಿಗೆ ಕೋರಿದ್ದರು. ಇದನ್ನು ಒಪ್ಪಿದ ಎಸ್.ಡಿ.ಪಿ.ಐ ನಿನ್ನೆ ಚುನಾವಣೆಯ ಸಂದರ್ಭದಲ್ಲಿ ತನ್ನ ಮಾತಿಗೆ ಬದ್ಧತೆಯನ್ನು ತೋರಿ  ಕಾಂಗ್ರೆಸ್  ಪರ ಮತಚಲಾಯಿಸಿತ್ತು. ಆದರೆ ಕಾಂಗ್ರೆಸ್ ನ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದ ಸ್ವತಂತ್ರ ಅಭ್ಯರ್ಥಿಯೊಬ್ಬರು ಚುನಾವಣೆಗೆ ಗೈರಾಗಿದ್ದರು. ಬಿಎಸ್ಪಿ ಕೊನೆಯ ಕ್ಷಣದಲ್ಲಿ ಬಿಜೆಪಿಯತ್ತ ವಾಲಿಕೊಂಡಿತು.

- Advertisement -

ಇದರೊಂದಿಗೆ ತಲಾ 17 ಮತಗಳೊಂದಿಗೆ ಬಿಜೆಪಿಯ ಅಧ್ಯಕ್ಷರಾಗಿ  ಆಶಾ ಮತ್ತು ಉಪಾಧ್ಯಕ್ಷೆಯಾಗಿ ಸುಧಾ ಆಯ್ಕೆಯಾದರು. ನಗರಸಭೆಯಲ್ಲಿ 15 ಸೀಟುಗಳನ್ನು ಹೊಂದಿದ್ದ ಬಿಜೆಪಿ ಪಕ್ಷ ಬಿಎಸ್ಪಿಯ 1 ಮತ ಮತ್ತು ಸ್ಥಳೀಯ ಸಂಸದರ 1 ಮತವನ್ನು ಪಡೆದು ನಗರಸಭೆಯನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 14 ಮತಗಳೊಂದಿಗೆ ಸೋಲನುಭವಿಸಿದೆ.

ಆರಂಭದಲ್ಲಿ 17 ಮತಗಳೊಂದಿಗೆ ಕಾಂಗ್ರೆಸ್ ಗೆಲ್ಲಲಿದೆಯೆಂದು ಭಾವಿಸಲಾಗಿತ್ತು. ಕಾಂಗ್ರೆಸ್ ನ 9 ಮತ, ಎಸ್.ಡಿ.ಪಿ.ಐ ಯ 6 ಮತ, ಸ್ಥಳೀಯ ಶಾಸಕರ 1 ಮತ, ಬಿಎಸ್ಪಿ ಅಭ್ಯರ್ಥಿ ಮತ್ತು ಸ್ವತಂತ್ರ ಅಭ್ಯರ್ಥಿಯ ತಲಾ ಒಂದು ಮತದ ನೆರವಿನಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ಲೆಕ್ಕಹಾಕಲಾಗಿತ್ತು.  

ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ನ ಸ್ಥಳೀಯ ಶಾಸಕರು ಗೈರು ಹಾಜರಾಗಿರುವುದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ಕೆರಳಿಸಿದೆ. ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹ್ಮದ್, “ಎಸ್.ಡಿ.ಪಿ.ಐ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ತನ್ನ ಮಾತಿಗೆ ಬದ್ಧತೆ ತೋರಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದೆ. ಆದರೆ ಕೊನೆಯ ಕ್ಷಣದಲ್ಲಿ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿಯವರು ಚುನಾವಣೆಗೆ ಗೈರಾಗುವುದಕ್ಕೆ ಕಾರಣವೇನು? ಇದರ ಹಿಂದಿನ ಕುತಂತ್ರವೇನು? ಎಂಬುದನ್ನು ತಿಳಿಸಬೇಕು” ಎಂದು ಹೇಳಿದ್ದಾರೆ.

“ಮೃದು ಹಿಂದುತ್ವ ಧೋರಣೆಯನ್ನು ಹೊಂದಿರುವ ಕಾಂಗ್ರೆಸ್ ಬಿಜೆಪಿಗೆ ನೆರವಾಗುವುದಕ್ಕಾಗಿ ಸ್ಥಳೀಯ ಆಡಳಿತವನ್ನು ಬಿಟ್ಟುಕೊಟ್ಟಿದೆ. ಜಾತ್ಯತೀತ ಸಿದ್ಧಾಂತ ಮತ್ತು ಜನರ ವಿಶ್ವಾಸಕ್ಕೆ ದ್ರೋಹವೆಸಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠವನ್ನು ಕಲಿಸಲಿದ್ದಾರೆ. ಬಿಜೆಪಿಯ ಎಲಾ ಜನವಿರೋಧಿ ನೀತಿಗಳ ವಿರುದ್ಧ ಮುಂದೆ ಎಸ್.ಡಿ.ಪಿ.ಐ ನಗರಸಭೆಯ ಒಳಗೆ ಮತ್ತು ಹೊರಗೆ ಹೋರಾಟಗಳನ್ನು ನಡೆಸಲಿದೆ” ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ  ಖಲೀಲುಲ್ಲಾ, ಉಪಾಧ್ಯಕ್ಷ ಸಮೀವುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ, ಕಾರ್ಯದರ್ಶಿ ಜಬೀನೂರ್ ಭಾಗವಹಿಸಿದ್ದರು.



Join Whatsapp