ಹೈದರಾಬಾದ್ : “ಮಹಾತ್ಮಾ ಗಾಂಧಿ ಅವರ ಮನವಿಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮೆ ಕೋರಿ ಅರ್ಜಿ ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು, ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಬಿಜೆಪಿ ಶೀಘ್ರದಲ್ಲೇ ‘ರಾಷ್ಟ್ರ ಪಿತ’ ಎಂದು ಘೋಷಿಸಲಿದೆ ಎಂದು ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಉವೈಸಿ ಅವರು, “ಅವರು (ಬಿಜೆಪಿ) ವಿಕೃತ ಇತಿಹಾಸವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು ಮುಂದುವರಿದರೆ, ಅವರು ಮಹಾತ್ಮಾ ಗಾಂಧಿಯನ್ನು ರಾಷ್ಟ್ರ ಪಿತ ಸ್ಥಾನದಿಂದ ತೆಗೆದುಹಾಕುತ್ತಾರೆ ಮತ್ತು ಮಹಾತ್ಮಾ ಗಾಂಧಿಯ ಹತ್ಯೆಯ ಆರೋಪ ಹೊತ್ತಿರುವ ಸಾವರ್ಕರ್ ಅವರನ್ನೇ ರಾಷ್ಟ್ರ ಪಿತ ಎಂದು ಘೋಷಿಸಲಿದ್ದಾರೆ ಎಂದು ಕುಟುಕಿದರು.
ಮಂಗಳವಾರ ‘ವೀರ ಸಾವರ್ಕರ್ ದೇಶ ವಿಭಜನೆಯನ್ನು ತಡೆಯಬಹುದಾಗಿದ್ದ ವ್ಯಕ್ತಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಮಹಾತ್ಮಾ ಗಾಂಧಿ ಅವರ ಮನವಿಯ ಮೇರೆಗೆ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.