ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಜಿ ಕಾಂಗ್ರೆಸ್ ನಾಯಕನನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ!

Prasthutha|

ನವದೆಹಲಿ: ಆಗಸ್ಟ್ 6 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ತಯಾರಿ ನಡೆಯುತ್ತಿದೆ. ಇದರ ನಡುವೆ ಎನ್‌ಡಿಎ ಕೂಟದ ಅಭ್ಯರ್ಥಿಯಾಗಿ ಪಂಜಾಬ್ ಮಾಜಿ ಸಿಎಂ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ ಎಂದು ಮಾಹಿತಿ ದೊರಕಿದೆ.

- Advertisement -

ಕಳೆದ ಭಾನುವಾರ ಅಮರಿಂದರ್ ಸಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅಮರಿಂದರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ಅಭ್ಯರ್ಥಿ ಕುರಿತ ಮಾತುಕತೆಯೂ ನಡೆದಿದೆ ಎಂದು ಅಮರಿಂದರ್ ಸಿಂಗ್ ಕಚೇರಿ ಮಾಹಿತಿ ಬಹಿರಂಗ ಪಡಿಸಿದೆ.

ಪಂಜಾಬ್ ವಿಧಾನಸಭಾ ಚುನಾವಣಗೂ ಮುನ್ನ ಪಂಜಾಬ್ ಕಾಂಗ್ರೆಸ್‌ ಭಿನ್ನಮತದಿಂದಾಗಿ ಒಡೆದು ಹೋಳಾಗಿತ್ತು. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರನ್ನು ಕಾಂಗ್ರೆಸ್ ನಿರ್ಲಕ್ಷ್ಯಿಸಿತ್ತು. ಬೇಸತ್ತ ಅಮರಿಂದರ್ ಸಿಂಗ್, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಕಾಂಗ್ರೆಸ್‌ನಿಂದ ಹೊರಬಂದು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಮುಂದೆ ಅಮರಿಂದರ್ ಎನ್‌ಡಿಎ ಕೂಟಕ್ಕೆ ಸೇರಿಕೊಂಡಿದ್ದರು.

- Advertisement -

ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ಜು.20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು ಜು.22 ಕೊನೆಯ ದಿನವಾಗಿದೆ

ರಾಜ್ಯಸಭೆ ಚುನಾವಣೆಗೆ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಮಾತ್ರ ಮತದಾರರು. ರಾಜ್ಯಗಳ ಶಾಸಕರಿಗೆ ಅವಕಾಶವಿಲ್ಲ. ಲೋಕಸಭೆಯಲ್ಲಿ ಎನ್‌ಡಿಎ ಬಹುಮತ ಹೊಂದಿದ್ದು, ರಾಜ್ಯಸಭೆಯಲ್ಲೂ ಬಹುಮತದ ಅಂಚಿನಲ್ಲಿದೆ. ಹೀಗಾಗಿ ಎನ್‌ಡಿಎ ಅಭ್ಯರ್ಥಿಯೇ ಉಪರಾಷ್ಟ್ರಪತಿ ಆಗುವುದು ನಿಶ್ಚಿತವಾಗಿದೆ

Join Whatsapp