ಅನ್ಯಧರ್ಮೀಯ ಪ್ರೇಮಿಗಳನ್ನು ಬೇರ್ಪಡಿಸಿ ಬಲವಂತದಿಂದ ಬಂಧನ ಕೇಂದ್ರಕ್ಕೆ । ಕೇರಳದ ತ್ರಿಪುಣಿತ್ತುರ ಮಾದರಿಯ ಹಿಂಸಾ ಕೇಂದ್ರಗಳು ಮಂಗಳೂರಿನಲ್ಲೂ ಇರುವ ಶಂಕೆ

Prasthutha: November 14, 2020

ಉಳ್ಳಾಲ : ಅನ್ಯಧರ್ಮೀಯ ಪ್ರೇಮಿಗಳನ್ನು ಬೇರ್ಪಡಿಸಿ, ಅವರಲ್ಲಿ ಮಹಿಳೆಯರನ್ನು ಸ್ವಧರ್ಮಕ್ಕೆ ಕರೆತರುವುದಕ್ಕೆ ಹಿಂಸಾತ್ಮಕವಾಗಿ ನಡೆದುಕೊಳ್ಳುವ ಕೇರಳದ ತ್ರಿಪುಣಿತ್ತುರದ ಯೋಗ ಕೇಂದ್ರದಂತಹ ಕೇಂದ್ರಗಳು ನಮ್ಮ ಜಿಲ್ಲೆಯಲ್ಲೂ ಅಸ್ತಿತ್ವದಲ್ಲಿವೆಯೇ? ಎಂಬ ಸಂದೇಹಗಳು ಉದ್ಭವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಉಳ್ಳಾಲ ವ್ಯಾಪ್ತಿಯ ಪಜೀರು ಗೋವನಿತಾಶ್ರಮದಲ್ಲಿ ವಿಧವೆ ಮಹಿಳೆಯೊಬ್ಬರನ್ನು ತಮ್ಮ ಇಬ್ಬರು ಮಕ್ಕಳೊಂದಿಗೆ ಕೂಡಿ ಹಾಕಲ್ಪಟ್ಟಿದ್ದು, ಮಹಿಳೆಯು ಅಲ್ಲಿಂದ ಪರಾರಿಯಾಗಿ ಮುಸ್ಲಿಂ ವ್ಯಕ್ತಿಯೊಂದಿಗೆ ಪತ್ತೆಯಾದ ಘಟನೆ ನಡೆದಿದೆ. ಅಡ್ಯಾರ್ ಪದವು ಮೂಲದ ಮಹಿಳೆಯ ಪತಿ ನಿಧನರಾಗಿದ್ದು, ಆಕೆ ಎರಡು ಮಕ್ಕಳೊಂದಿಗೆ ವಾಸವಾಗಿದ್ದರು. ಮಂಗಳೂರು ಹೊರವಲಯದ ಮೂಲದ ಮುಸ್ಲಿಮ್ ಯುವಕನೋರ್ವನ ಜೊತೆ ಆಕೆಗೆ ಸಂಪರ್ಕವಿತ್ತು ಎನ್ನಲಾಗಿದೆ. ಈ ಜೋಡಿಯ ಸಂಬಂಧವನ್ನು ‘ಲವ್ ಜಿಹಾದ್’ ಎಂದು ಆಪಾದಿಸಿ, ಸ್ಥಳೀಯ ಬಿಜೆಪಿ ಪರ ಸಂಘಟನೆಗಳ ಕಾರ್ಯಕರ್ತರು ಆಕೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಿಶ್ವ ಹಿಂದು ಪರಿಷತ್ತಿಗೆ ಸೇರಿದ್ದೆನ್ನಲಾದ ಪಜೀರು ಗೋವನಿತಾಶ್ರಮಕ್ಕೆ ಬಲವಂತವಾಗಿ ಸೇರಿಸಿದ್ದರೆನ್ನಲಾಗಿದೆ. ಆದರೆ, ಐದು ದಿನಗಳ ಹಿಂದೆ ಆಕೆ ಇಬ್ಬರು ಮಕ್ಕಳನ್ನೂ ಬಿಟ್ಟು, ಅಲ್ಲಿಂದ ಪರಾರಿಯಾಗಿದ್ದಾರೆ. ಬಿಜೆಪಿ ಪರ ಸಂಘಟನೆಗಳ ಕಾರ್ಯಕರ್ತರು ಆಕೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಆಕೆ ಉಳ್ಳಾಲದಲ್ಲಿ ಅದೇ ಮುಸ್ಲಿಮ್ ಯುವಕನೊಂದಿಗೆ ಪತ್ತೆಯಾಗಿದ್ದಾಳೆ. ಕೊಣಾಜೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ತಾನು ಆತನೊಂದಿಗೆ ಹೋಗುವುದಾಗಿಯೇ ಪಟ್ಟು ಹಿಡಿದಿದ್ದಾಳೆ ಎಂದು ತಿಳಿದುಬಂದಿದೆ.

ಇಬ್ಬರು ಅನ್ಯಧರ್ಮೀಯ ಪ್ರೇಮಿಗಳ ನಡುವಿನ ಸಂಬಂಧವನ್ನು ಅಸ್ತಿತ್ವದಲ್ಲಿಯೇ ಇರದ ‘ಲವ್ ಜಿಹಾದ್’ ಎಂದು ಬಣ್ಣಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದರ ಹಿಂದೆ ತ್ರಿಪುಣಿತ್ತುರ ಘಟನೆ ಸ್ಮರಿಸುವಂತಾಗಿದೆ.

ತ್ರಿಪುಣಿತ್ತುರದಲ್ಲಿ 2017ರಲ್ಲಿ ಕ್ರೈಸ್ತ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಹಿಂದೂ ಯುವತಿಯೊಬ್ಬಳನ್ನು ಸ್ವಧರ್ಮಕ್ಕೆ ಕರೆತರುವ ಉದ್ದೇಶದಿಂದ ಅಲ್ಲಿನ ಆರ್ಷ ವಿದ್ಯಾ ಸಮಾಜಂ ಅಲಿಯಾಸ್ ಯೋಗ ಮತ್ತು ಚಾರಿಟೇಬಲ್ ಟ್ರಸ್ಟ್ ಗೆ ಸೇರಿಸಲಾಗಿತ್ತು.

ಆದರೆ, ಅಲ್ಲಿ ಕೆಲವು ದಿನಗಳಿದ್ದ ಯುವತಿ ಅಲ್ಲಿಂದ ಪರಾರಿಯಾಗಿ ಬಂದು, ತನ್ನ ಮೇಲೆ ಯೋಗ ಕೇಂದ್ರದಲ್ಲಿ ದೈಹಿಕ ಹಲ್ಲೆ ನಡೆಸಿ ಮತ್ತು ಬಲವಂತದಿಂದ ಮತ್ತು ಬರುವ ದ್ರವ್ಯ ನೀಡುವ ಮತ್ತು ಮಾನಸಿಕ ಹಿಂಸೆ, ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದಳು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು.

ಕ್ರೈಸ್ತ ಸಮುದಾಯಕ್ಕೆ ಸೇರಿದ ರಿಂಟೊ ಐಸಾಕ್ ಎಂಬಾತನೊಂದಿಗಿನ ತನ್ನ ವೈವಾಹಿಕ ಜೀವನದಿಂದ ಬೇರ್ಪಡಿಸುವ ಸಲುವಾಗಿ ಹಿಂದುತ್ವ ಮೂಲಭೂತವಾದಿಗಳು ತನಗೆ ಹಿಂಸಾತ್ಮಕ ಕಿರುಕುಳ ನೀಡಿದರು. ಕಾನೂನು ಬಾಹಿರವಾಗಿ ತನ್ನನ್ನು ವಶದಲ್ಲಿಟ್ಟುಕೊಂಡಿರುವುದನ್ನು ವಿರೋಧಿಸಿ ತಾನು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ತನಗೆ ಹಿಂಸೆ ನೀಡಲಾಯಿತು. ತಾನು ಐಸಾಕ್ ನೊಂದಿಗೆ ಹೋದರೆ ಕೊಲ್ಲುವುದಾಗಿ ಯೋಗ ಕೇಂದ್ರದ ಗುರೂಜಿ ಬೆದರಿಕೆಯೊಡ್ಡಿದರು. ಕೇಂದ್ರದಲ್ಲಿ ನನ್ನಂತೆಯೇ 65 ಮಂದಿ ಹೆಣ್ಣು ಮಕ್ಕಳು ಅಲ್ಲಿನ ಬಂಧನ ಕೇಂದ್ರದಲ್ಲಿ ಇದ್ದಾರೆ. ಕೇಂದ್ರದಲ್ಲಿರುವವರಿಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ವಿರುದ್ಧ ದ್ವೇಷವನ್ನು ಮೂಡಿಸಲಾಗುತ್ತದೆ. ಅವರ ಮೇಲೆ ಲೈಂಗಿಕ ದೌರ್ಜನ್ಯವೂ ನಡೆಯುತ್ತದೆ ಎಂದು ಅಂದು ಯೋಗ ಕೇಂದ್ರದ ವಿರುದ್ಧ ದೂರು ನೀಡಿದ್ದ ಶ್ವೇತಾ ಹರಿದಾಸ್ ಆಪಾದಿಸಿದ್ದಳು.

ಇದೀಗ ಉಳ್ಳಾಲ ಘಟನೆಯಲ್ಲಿ ಮಹಿಳೆ ಗೋವನಿತಾಶ್ರಮದಲ್ಲಿ ತನ್ನ ಮೇಲೆ ನಡೆಯುತ್ತಿದ್ದ ಹಿಂಸೆಯನ್ನು ತಡೆಯಲಾರದೆ ಮಕ್ಕಳನ್ನು ಅಲ್ಲಿಯೇ ತೊರೆದು ಪರಾರಿಯಾಗಿದ್ದಾಳೆಂಬ ಶಂಕೆ ಮೂಡಿದ್ದು, ಪೊಲೀಸರು ಈ ರೀತಿಯ ಹಿಂಸಾ ಕೇಂದ್ರಗಳ ಕುರಿತು ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!