ಸಿಡ್ನಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಬೇಕಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಕಾರ್ಯಕ್ರಮ ಆರಂಭಗೊಳ್ಳಲು ಹನ್ನೊಂದು ಗಂಟೆ ಇರುವಾಗಲೇ ಕಾರ್ಯಕ್ರಮ ರದ್ದುಗೊಳಿಸುವ ತೀರ್ಮಾನ ಪ್ರಕಟಿಸಲಾಗಿದೆ. . ಸ್ವಿನ್ ಬರ್ನ್ ವಿವಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಆಯೋಜಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾನವಹಕ್ಕು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಇಂಡಿಯಾ ಯೂತ್ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಅವರ ಮೊದಲ ಆಸ್ಟ್ರೇಲಿಯಾ ಕಾರ್ಯಕ್ರಮ ಮೊಟಕುಗೊಂಡಿದೆ.
ಆಸ್ಟ್ರೇಲಿಯಾ ಶಿಕ್ಷಣ ಕೇಂದ್ರ (ECA) ಆಯೋಜಿಸಿದ್ದ ಕಾರ್ಯಕ್ರಮದ ರದ್ದುಪಡಿಸುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.
ಸೂರ್ಯ ಅವರು ಆಸ್ಟ್ರೇಲಿಯಾ ಇಂಡಿಯಾ ಯೂತ್ ಡೈಲಾಗ್ (AIYD) ಆಹ್ವಾನದ ಮೇರೆಗೆ ವಾರ್ಷಿಕ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
ಈ ಮಧ್ಯೆ ಭಾರತೀಯ ಮೂಲದ ಖ್ಯಾತ ಆಸ್ಟ್ರೇಲಿಯನ್ ಲೇಖಕ ಮತ್ತು UNSW ನಲ್ಲಿ ಉಪನ್ಯಾಸಕರಾಗಿರುವ ಗೊನ್ಸಾಲ್ವೆಸ್ ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ಆಸ್ಟ್ರೇಲಿಯಾದಲ್ಲಿ ಬೆಂಬಲಿಸಬೇಡಿ ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.
“ಹಿಂದೂ ಧರ್ಮ ಸುಂದರ, ಆಧ್ಯಾತ್ಮಿಕ ಜೀವನ ವಿಧಾನ. ಹಿಂದುತ್ವ = ಫ್ಯಾಸಿಸ್ಟ್ ಸ್ತ್ರೀದ್ವೇಷವಾದಿ, ಮಿಲಿಟರಿವಾದಿ ಸರ್ವಾಧಿಕಾರ ಸಿದ್ಧಾಂತ. ದಯವಿಟ್ಟು ಇಂತಹ ಸ್ತ್ರೀದ್ವೇಷವಾದಿ ಹಿಂದುತ್ವ ಫ್ಯಾಸಿಸ್ಟ್ ಅನ್ನು ಆಸ್ಟ್ರೇಲಿಯಾದಲ್ಲಿ ಬೆಂಬಲಿಸಬೇಡಿ. ದಯವಿಟ್ಟು ಇಲ್ಲಿ ಮನವಿಗೆ ಸಹಿ ಮಾಡಿ” ಎಂದು ಎಂಎಸ್ ಗೊನ್ಸಾಲ್ವಿಸ್ ಟ್ವೀಟ್ ಮಾಡಿದ್ದರು.
“ಉನ್ನತ ಶಿಕ್ಷಣದ ಸಂದರ್ಭದಲ್ಲಿ ಸ್ತ್ರೀದ್ವೇಷ, ಮಿಲಿಟರಿ ಸಿದ್ಧಾಂತವನ್ನು ವೇದಿಕೆಗೊಳಿಸುತ್ತಿರುವುದು ಖಂಡನೀಯ. ಅಜಾಗರೂಕತೆಯಿಂದ ಕೂಡಿದ ಹಾನಿಕಾರಕವಾದ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವ ಬದಲು ನಮಗೆ ಉತ್ತಮವಾದ ದಕ್ಷಿಣ ಏಷ್ಯಾದ ಸಾಕ್ಷರತೆಯ ಅಗತ್ಯವಿದೆ”ಎಂದು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಡಾ ಸುಖಮಣಿ ಖೋರಾನಾ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದೊಂದಿಗೆ ಬಿಜೆಪಿ ನಾಯಕನ ಭೇಟಿಯನ್ನು ತಡೆಯಲು ಆನ್ ಲೈನ್ ಅರ್ಜಿಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.