ಪೊಲೀಸ್ ಠಾಣೆಯಲ್ಲೇ ಶಿವಸೇನಾ ಮುಖಂಡನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕ!

Prasthutha|

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಶಿವಸೇನೆಯ ನಗರ ಮುಖ್ಯಸ್ಥರ ಮೇಲೆ ಬಿಜೆಪಿ ಶಾಸಕ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿದ ಘಟನೆ ತಡ ರಾತ್ರಿ ಮುಂಬೈನಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮಹೇಶ್ ಗಾಯಕ್ವಾಡ್ ಮೇಲೆ ಗಣಪತ್ ಗಾಯಕ್ವಾಡ್ ಗುಂಡು ಹಾರಿಸಿದ್ದಾರೆ.

- Advertisement -

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸಬಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಬೆಂಬಲಿಗರು ಶಿವಸೇನಾ (ಏಕನಾಥ್ ಶಿಂಧೆ)ಬಣದ ನಾಯಕ ಮಹೇಶ್ ಹಾಯಕ್ವಾಡ್ ಅವರ ಬೆಂಬಲಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಇತರ ಇಬ್ಬರು ಕೂಡ ಗಾಯಗೊಂಡಿದ್ದಾರೆ.

ಮುಂಬೈನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಲ್ಯಾಣ್ ಪೂರ್ವ ಕ್ಷೇತ್ರವನ್ನು ಗಣಪತ್ ಗಾಯಕ್ವಾಡ್ ಪ್ರತಿನಿಧಿಸುತ್ತಾರೆ. ಅವರ ಪಕ್ಷವು ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ಅವರ ಸೇನೆಯೊಂದಿಗೆ ಮೈತ್ರಿ ಹೊಂದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಉಭಯ ಕಡೆಯವರು ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಮಾತುಕತೆ ವಾಗ್ವಾದಕ್ಕೆ ತಿರುಗಿ ತಡ ರಾತ್ರಿ ಮಹೇಶ್ ಗಾಯಕ್ವಾಡ್ ಮೇಲೆ ಗುಂಡು ಹಾರಿಸಲಾಗಿದೆ.

- Advertisement -

ಮಹೇಶ್ ಗಾಯಕ್ವಾಡ್ ಅವರ ದೇಹದಿಂದ ಐದು ಗುಂಡುಗಳನ್ನು ಹೊರತೆಗೆಯಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಬಂಧಿತರಾಗಿರುವ ಗಣಪತ್ ಗಾಯಕ್ವಾಡ್ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿ, ‘ಮಹೇಶ್ ಗಾಯಕ್ವಾಡ್ ತಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ’ ಎಂದು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರವನ್ನು ಶಿವಸೇನೆಯ ಉದ್ಧವ್ ಠಾಕ್ರೆ ಬಣ ತರಾಟೆಗೆ ತೆಗೆದುಕೊಂಡಿದೆ. ಪೊಲೀಸ್ ಠಾಣೆಯೊಳಗೆ ಬಿಜೆಪಿ ಶಾಸಕ ಗುಂಡಿನ ದಾಳಿ ನಡೆಸಿದ್ದು, ಗುಂಡು ತಗುಲಿದ ವ್ಯಕ್ತಿ ಮುಖ್ಯಮಂತ್ರಿ ಹಾಗೂ ಮಾಜಿ ಕಾರ್ಪೋರೇಟರ್ ಅವರ ಆಪ್ತರು, ಅವರಿಬ್ಬರೂ ಅಧಿಕಾರದಲ್ಲಿದ್ದಾರೆ ಎಂದರೆ ಈ ಜನರಿಗೆ ಕಾನೂನಿನ ಭಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಉದ್ಧವ್ ಬಣದ ವಕ್ತಾರ ಆನಂದ್ ದುಬೆ ಹೇಳಿದ್ದಾರೆ.

Join Whatsapp