ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಾಯಿ

Prasthutha|

ಚಿತ್ರದುರ್ಗ : ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಪುಟ್ಟಮ್ಮ ಹಿಂದೂ ದೇವರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.

- Advertisement -

ಗೂಳಿಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಪುಟ್ಟಮ್ಮ ಹೊಸದುರ್ಗ ಪಟ್ಟಣದ ಹಿರಿಯೂರು ರಸ್ತೆಯಲ್ಲಿರುವ ಚರ್ಚ್‌ಗೆ ಪ್ರತಿದಿನ ಪ್ರಾರ್ಥನೆಗೆ ತೆರಳುತ್ತಿದ್ದು, ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ.

ಪುಟ್ಟಮ್ಮ ಅವರ ಮೂರು ಮಕ್ಕಳಲ್ಲಿ ತೆರಿಗೆ ಇಲಾಖೆಯ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಮೊದಲ ಮಗ ತಿಪ್ಪೇಸ್ವಾಮಿ ಏಳು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ತಿಪ್ಪೇಸ್ವಾಮಿಯ ಸಾವಿನ ಬಳಿಕ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದಾರೆ.

- Advertisement -

ಗೂಳಿಹಟ್ಟಿ ಗ್ರಾಮದಲ್ಲಿ ಪುಟ್ಟಮ್ಮ ಇರುವ ಮನೆ 2018ರ ಮಳೆಗಾಲದಲ್ಲಿ ಬಿದ್ದು ಹೋಗಿತ್ತು.  ಆ ಬಳಿಕ ಶಾಸಕರು ತಾಯಿಗಾಗಿ ಹೊಸ ಮನೆಯನ್ನು ಕಟ್ಟಿಸಿಕೊಟ್ಟಿದ್ದರು. ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಹಿಂದೂ ದೇವರುಗಳ ಫೋಟೋಗಳಿಗೆ ಪೂಜೆ ಸಲ್ಲಿಸಲಾಗಿದ್ದರಿಂದ ಪುಟ್ಟಮ್ಮ ಆ ಮನೆಯಲ್ಲಿ ವಾಸಿಸದೆ ಹೊಸದುರ್ಗ ಪಟ್ಟಣದ ಗೊರವಿನಕಲ್ಲು ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.  ಪತಿ ದಿವಾಕರಪ್ಪ ಮತ್ತು ಪುತ್ರ ತಿಪ್ಪೇಸ್ವಾಮಿ ಸಾವಿನ ಬಳಿಕ ಹಿಂದೂ ಧರ್ಮದ ದೇವರ ಮೇಲೆ ಪುಟ್ಟಮ್ಮ ಬೇಸರ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.

ಶಾಸಕ ಗೂಳಿಹಟ್ಟಿ ಶೇಖರ್ ಹಿಂದೂ ಧರ್ಮ ಹಾಗೂ ದೇವರುಗಳ ಭಕ್ತರಾಗಿದ್ದಾರೆ. ಪುಟ್ಟಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? ಎಂಬ ಬಗ್ಗೆ ಅಧಿಕೃತವಾಗಿ ಯಾರೂ ಸಹ ಮಾಹಿತಿ ನೀಡಲಿಲ್ಲ.

Join Whatsapp