ಡೆಹ್ರಾಡೂನ್: ಗಣಿಗಾರಿಕೆ ಮಾಫಿಯಾವನ್ನು ಬೆನ್ನಟ್ಟುವ ವೇಳೆ ಪೊಲೀಸರು ಮತ್ತು ಗಣಿಗಾರಿಕೆ ಮಾಫಿಯಾದವರ ನಡುವಿನ ಗುಂಡಿನ ಚಕಮಕಿಯಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಬಿಜೆಪಿ ಮುಖಂಡನೊಬ್ಬನ ಪತ್ನಿ ಸಾವನ್ನಪ್ಪಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಸಾವನ್ನಪ್ಪಿದ ಮಹಿಳೆಯನ್ನು ಗುರುಪ್ರೀತ್ ಕೌರ್ ಎಂದು ಗುರುತಿಸಲಾಗಿದೆ. ಸಾವಿನ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರ ವಿರುದ್ಧ ಉತ್ತರಾಖಂಡದಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಗಣಿಗಾರಿಕೆ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದ ಝಫರ್ ಎಂಬಾತನನ್ನು ಬಂಧಿಸಲು ಮೊರಾದಾಬಾದ್ ಪೊಲೀಸ್ ತಂಡ ಉತ್ತರಾಖಂಡದ ಜಸ್ಪುರ್ ತಲುಪಿದಾಗ ಉಂಟಾದ ಘರ್ಷಣೆಯಲ್ಲಿ ಘಟನೆ ಸಂಭವಿಸಿದೆ.
ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಝಫರ್ ಎಂಬಾತನ ಬಂಧನಕ್ಕೆ 50 ಸಾವಿರ ನಗದು ಬಹುಮಾನ ಘೋಷಿಸಲಾಗಿದ್ದು, ಆತ ಭುಲ್ಲರ್ ಎಂಬವರ ಮನೆಯಲ್ಲಿ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ಲಭಿಸಿತ್ತು. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ನಮ್ಮ ತಂಡ ಅಲ್ಲಿಗೆ ತಲುಪಿದಾಗ ಪೊಲೀಸರನ್ನೇ ಒತ್ತೆಯಾಳಾಗಿಸಿ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ಮೊರಾದಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿ ಶಲಭ್ ಮಾಥುರ್ ತಿಳಿಸಿದ್ದಾರೆ.
ಐವರು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.