►ಸುಳ್ಳು ಸುದ್ದಿ ಹಬ್ಬಿಸದಂತೆ ಖಾಕಿ ವಾರ್ನಿಂಗ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಯಕ್ತಿಕ ದ್ವೇಷದ ಕಾರಣದಿಂದ ಮಂಗಳವಾರ ನಡೆದಿದ್ದ ಇಬ್ಬರು ಉದ್ಯಮಿಗಳ ಕೊಲೆ ಪ್ರಕರಣಕ್ಕೆ ಬಿಜೆಪಿ ನಾಯಕರು ಬೇರೆಯದ್ದೇ ಆಯಾಮ ನೀಡಲು ಪ್ರಯತ್ನಿಸಿದ್ದಾರೆ. ಈ ಜೋಡಿ ಕೊಲೆಯಲ್ಲಿ ಹಿಂದುತ್ವವನ್ನು ಎಳೆತಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಟಾರ್ಗೆಟ್ ಕಿಲ್ಲಿಂಗ್ ನಡೀತಿದೆ ಎಂದು ಬಿಜೆಪಿಯ ಸಿಟಿ ರವಿ ಆರೋಪಿಸಿದ್ದಾರೆ. ಫಣೀಂದ್ರ, ವಿನುಕುಮಾರ್ ಹತ್ಯೆ ಮೇಲ್ನೋಟಕ್ಕೆ ವೈಯಕ್ತಿಕ ಅನಿಸುತ್ತದೆ. ಆದರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಯಲ್ಲಿ ಗುರುತಿಸಿಕೊಂಡ ಜನ. ಹಾಗಿದ್ದಾಗ ಸರಣಿ ಹತ್ಯೆಯ ಹಿಂದೆ ಪಿತೂರಿ ಇದ್ಯಾ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ.
ಸಿಟಿ ರವಿ ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ದಿಯೋಧರ್ ಕೂಡ ಟ್ವೀಟ್ ಮಾಡಿ, ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ. ಟಿಪ್ಪು ಸಿದ್ದಾಂತಿಗಳಿಂದ ಕರ್ನಾಟಕಕ್ಕೆ ಅಪಾಯಕಾರಿ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರಲ್ಲಿ ಹಿಂದೂ ನಾಯಕನ ಹತ್ಯೆ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ನೆಟ್ಟಿಗರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ಇಂದ ಇರಿ, ಈ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ತನಿಖೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.