►ಸಿದ್ದರಾಮಯ್ಯ ಈಗ ಅರೆ ಅಲೆಮಾರಿ, ಕ್ಷೇತ್ರ ಸಿಗದೆ ಕೊನೆಗೆ ಮುಸಲ್ಮಾನರ ಕ್ಷೇತ್ರಕ್ಕೆ ಬರುತ್ತಾರೆ
ಬೆಂಗಳೂರು; ದೈನಂದಿನ ಅಗತ್ಯ ಬಳಕೆ ವಸ್ತುಗಳ ಮೇಲೆ ಕೇಂದ್ರ ಸರಕಾರ GST ಹೆಚ್ಚಿಸಿರುವುದರ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಬೆಲೆ ಏರಿಕೆಯನ್ನು ಪ್ರತಿಭಟಿಸಿ ವಿಜಯಪುರದ ನಿವಾಸಿಗಳು ಬೀದಿಗಿಳಿದಿದ್ದು ಪ್ರತಿಭಟನಕಾರರ ವಿರುದ್ಧ ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಹಾಲು ಮೊಸರು ಮತ್ತು ತುಪ್ಪ ಮುಂತಾದ ದಿನಬಳಕೆ ಪದಾರ್ಥಗಳ ಮೇಲೆ ಕೇಂದ್ರ ಸರಕಾರ ವಿಧಿಸಿದ ತೆರಿಗೆಯನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಜನರು ಬೆಲೆ ಏರಿಕೆ ಆದಾಗ ಮಾತ್ರ ಪ್ರತಿಭಟಿಸುತ್ತಾರೆ. ಬೆಲೆ ಇಳಿಕೆ ಆದಾಗ ಮಾತಾಡಲ್ಲ ಎಂದಿದ್ದಾರೆ.
ಮೃತ ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಪತ್ನಿ ರಾಜ್ಯಪಾಲರಿಗೆ ದೂರು ನೀಡುರುವ ವಿಚಾರದ ಬಗ್ಗೆ ಕೇಳಿದಾಗ, ತನಿಖೆ ನಡೆಯುವ ಸಂದರ್ಭದಲ್ಲಿ ಏನು ಬೇಕಾದರೂ ಮಾಡುವ ಅಧಿಕಾರವಿದೆ ಮಾಡಲಿ ಎಂದರು.
ಈ ವಿಚಾರದಲ್ಲಿ ಈಶ್ವರಪ್ಪನವರ ತನಿಖೆಗೆ ಕರೆದಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ತನಿಖೆ ಆರಂಭವಾಗಿದೆಯೋ ಬಿಟ್ಟಿದೆಯೋ ನನಗೇನು ಗೊತ್ತು..?. ಅದರ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯಪಾಲರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಆರೋಪ ಮುಕ್ತರಾಗಿ ಮತ್ತೆ ಸಂಪುಟಕ್ಕೆ ಬರುತ್ತೀರಾ ಎಂದು ಕೇಳಿದಾಗ, ನಾನು ಹೇಗೆ ಹೇಳಲಿ. ಯಾವಾಗ ಕೇಸ್ ಮುಗಿಯುತ್ತೋ ಆವಾಗ ನೋಡೋಣ. ನನ್ನನ್ನು ತನಿಖೆಗೆ ಕರೆದಿಲ್ಲ ಎಂದು ಯಾರು ಹೇಳಿದ್ರು..? ಇದು ನಿಮಗೆ ಗೊತ್ತಾ? ತನಿಖೆಗೆ ಕರೆದಿಲ್ಲ ತೆನಿಖೆ ಶುರುವಾಗಿಲ್ಲ ಇವೆಲ್ಲ ನಿಮ್ಗೆ ಗೊತ್ತಾ? ಎಂದು ಹೇಳಿದ ಅವರು, ಬೇರೆಯವರ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಆದರೆ ರಾಜ್ಯಪಾಲರ ಮಾತಿಗೆ ನಾನು ವಿರುದ್ಧವಾಗಿ ಹೋಗಲು ಆಗುವುದಿಲ್ಲ ಎಂದು ಹೇಳಿದರು.
ಸರ್ಕಾರ ಟೇಕ್ ಆಫ್ ಆಗದೆ ಇರುವುದಕ್ಕೆ ಮೋದಿಯನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ನಾಡಿದ್ದು ಕರೆಸುತ್ತಿದ್ದೀರಾ?. ಇದು ಏನು ಕಾಂಗ್ರೆಸ್ ಬದುಕಿದೆ ಎಂದು ತೋರಿಸೋಕಾ? ಡಿಕೆಶಿಗೆ ಮೋದಿ ಬಗ್ಗೆ ಮಾತನಾಡಿಲ್ಲ ಅಂದರೆ ತಿಂದಿರೋ ಅನ್ನ ಸೇರುವುದಿಲ್ಲ. ಊಟ ಸೇರಲ್ಲ ಅಂದರೆ ಸಾಯ್ತಾರೆ. ಯಾರ ಬಗ್ಗೆನಾದರೂ ಟೀಕೆ ಮಾಡಬೇಕಾದರೆ ಅದು ನಮಗೆ ತಿರಗುಬಾಣ ಆಗುತ್ತದೆ ಎಂದು ತಿಳಿದುಕೊಂಡು ಹೇಳಿಕೆ ಕೊಟ್ಟರೆ ಒಳ್ಳೆಯದು ಎಂದು ಈಶ್ವರಪ್ಪ ಹೇಳಿದರು.
ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಕಾಲ ಬಂದಿದೆ ಎಂಬ ಡಿಕೆಶಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದು, ಒಕ್ಕಲಿಗ ಸಮುದಾಯದಲ್ಲಿ ಡಿಕೆಶಿ ಸಿಎಂ ಆಗುವುದಾಗಿ ಹೇಳಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಇನ್ನೂ ಹಲವರಿದ್ದಾರೆ. ಕೃಷ್ಣಬೈರೇಗೌಡರಿಗೆ ಸಿಎಂ ಸ್ಥಾನ ಬಿಟ್ ಕೊಡ್ತಾರಾ ಡಿಕೆಶಿ? ಎಂದು ಪ್ರಶ್ನಿಸಿದರು..
ಸಿದ್ದರಾಮೋತ್ಸವಕ್ಕೆ ಆಹ್ವಾನ ಬಂದರೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನನಗೇನು ಗ್ರಹಚಾರನಾ ಹೋಗೋಕೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಆದ ಪರಿಸ್ಥಿತಿಯೇ ಆಗುತ್ತದೆ. ಸಿದ್ದರಾಮಯ್ಯ ಈಗ ಅಲೆಮಾರಿ ಅಲ್ಲ, ಅರೆ ಅಲೆಮಾರಿ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಇನ್ನೂ ಯಾವುದೇ ಕ್ಷೇತ್ರ ಸಿಕ್ಕಿಲ್ಲ. ಇನ್ನೂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದಲ್ಲೇ ಇದ್ದಾರೆ. ಅವರು ಕ್ಷೇತ್ರ ಹುಡುಕಿ, ಹುಡುಕಿ ಕೊನೆಗೆ ಮುಸಲ್ಮಾನರ ಕ್ಷೇತ್ರಕ್ಕೆ ಬರುತ್ತಾರೆ. ಜಮ್ಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆಗೆ ಬಂದು ಮುಸಲ್ಮಾನರ ಕೈ ಕಾಲು ಹಿಡಿದು ಗೆಲ್ಲಿಸಿ ಎಂದು ಬೇಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಅಮೇಥಿ ಕ್ಷೇತ್ರ ಬಿಟ್ಟು, ಕೇರಳದ ವಯನಾಡ್ ಗೆ ಬಂದರು. ಅದೇ ರೀತಿಯ ದುಸ್ಥಿತಿ ಸಿದ್ದರಾಮಯ್ಯಗೆ ಬರುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ದುಬಾರಿ ಬೆಲೆ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿ, ಬೆಲೆ ಏರಿಕೆ ಕೇಂದ್ರದ ಏಕಪಕ್ಷೀಯ ತೀರ್ಮಾನವಲ್ಲ. ಇದು ಕೌನ್ಸಿಲ್ ಕೈಗೊಂಡ ತೀರ್ಮಾನ. ಇದಕ್ಕಾಗಿ ಮೋದಿ ಸರಕಾರವನ್ನು ಟೀಕಿಸುವುದು ಸರಿಯಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದ್ದಾರೆ.
ಪೆಟ್ರೋಲ್ ,ಸಿಲಿಂಡರ್ ಬೆಲೆ ಗಗನೆತ್ತರಕ್ಕೆ ಏರುತ್ತಿದ್ದು ಇದೀಗ ದಿನಬಳಕೆಯ ವಸ್ತುಗಳ ಮೇಲೂ ತೆರಿಗೆ ವಿಧಿಸಿ ಸಾಮಾನ್ಯ ಜನರು ಕಂಗಾಲಾಗಿರುವಾಗ ಮುಖ್ಯಮಂತ್ರಿ ಬೊಮ್ಮಾಯಿ ಸಹಿತ ಬಿಜೆಪಿ ನಾಯಕರನ್ನು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.