ದೆಹಲಿ ಪ್ರತಿಭಟನೆಯ ವೇಳೆ ಮುಸ್ಲಿಮ್ ವಿರೋಧಿ ಘೋಷಣೆ ಕೂಗಿದ ಬಿಜೆಪಿ ನಾಯಕ ಸೇರಿದಂತೆ 6 ಮಂದಿಯ ಬಂಧನ

Prasthutha|

ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಭಾನುವಾರ ನಡೆದ ಪ್ರತಿಭಟನೆಯ ವೇಳೆ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿದ ಸಂಬಂಧ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸೇರಿದಂತೆ 6 ದುಷ್ಕರ್ಮಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಪ್ರತಿಭಟನೆಯ ಆಯೋಜಕರಲ್ಲೊಬ್ಬರಾದ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಇತರ ಆರೋಪಿಗಳನ್ನು ಈ ಸಂಬಂಧ ನಿನ್ನೆ ತಡರಾತ್ರಿ ವರೆಗೆ ದೆಹಲಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದರು. ದೆಹಲಿಯ ಹೃದಯ ಭಾಗದಲ್ಲಿರುವ ಜಂತರ್ ಮಂತರ್ ನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಬೆದರಿಕೆ ಹಾಕುವ ವೀಡಿಯೋ ವೈರಲ್ ಆಗಿದ್ದು, ಇದರ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರಾಮ್ ರಾಮ್ ಪಠಣ, ಮುಸ್ಲಿಮರನ್ನು ಕೊಲ್ಲುವ ಬೆದರಿಕೆ ಸೇರಿ ಕೋಮು ಪ್ರಚೋದನಕಾರಿ ಅಂಶಗಳು ಬಹಿರಂಗವಾಗಿತ್ತು. ಮಾತ್ರವಲ್ಲದೇ ಆ ವೀಡಿಯೋದಲ್ಲಿ “ಹಿಂದೂಸ್ತಾನ್ ಮೇ ರೆಹನಾ ಹೋಗ ಜೈ ಜೈ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಉಳಿಯಲು, ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂಬ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಕಾಣಿಸತೊಡಗಿದೆ. ಸಂಸತ್ ಭವನ ಮತ್ತು ಸರ್ಕಾರಿ ಕಚೇರಿಯ ಕೇವಲ 1 ಕಿಲೋ ಮೀಟರ್ ಅಣತಿ ದೂರದಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

- Advertisement -

ಪ್ರತಿಭಟನೆಯಲ್ಲಿ ಭಾಗವಹಿಸಿದವರ ಮೇಲೆ ಕಾನೂನು ಕ್ರಮ ಜಗುಗಿಸದ ದೆಹಲಿ ಪೊಲೀಸರ ನಡೆಯ ವಿರುದ್ಧ ಸಾರ್ವಜನಿಕರ ವ್ಯಾಪಕ ಆಕ್ರೋಶದಿಂದ ಎಚ್ಚೆತ್ತ ಪೊಲೀಸರು ಸೋಮವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿ ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿತ್ತು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ಸೇವ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ನಿರ್ದೇಶಕರಾದ ಪ್ರೀತ್ ಸಿಂಗ್, ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನೀತ್ ಕ್ರಾಂತಿ ಮತ್ತು ದೀಪಕ್ ಎಂಬವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.



Join Whatsapp