ಒಂದೇ ಕಾಮಗಾರಿಗೆ ಹಲವು ಬಾರಿ ಶಂಕುಸ್ಥಾಪನೆ ಮಾಡಿ ಜನರನ್ನು ಮರುಳು ಮಾಡುತ್ತಿರುವ ಬಿಜೆಪಿ: SDPI ಟೀಕೆ

Prasthutha|

- Advertisement -

ಮಂಗಳೂರು: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಪದೇ ಪದೇ ಮಂಗಳೂರಿಗೆ ಕರೆಸಿ ಕಾಮಗಾರಿಗೆ ಚಾಲನೆ ಎಂಬ ಹೆಸರಿನಲ್ಲಿ ಸಂಸದರು ಹಾಗೂ ಬಿಜೆಪಿ ಶಾಸಕರು ಸರಕಾರಿ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಪುಕ್ಕಟೆ ಪ್ರಚಾರಗಿಟ್ಟಿಸುತ್ತಿದ್ದಾರೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದ್ದಾರೆ.

ಒಂದೇ ಕಾಮಗಾರಿಯನ್ನು ಹಲವು ಬಾರಿ ಶಂಕುಸ್ಥಾಪನೆ, ವೀಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಚಾಲನೆ ನೀಡುವ ದಕ್ಷಿಣ ಕನ್ನಡದ ಸಂಸದರು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಮೂಲ್ಕಿ- ಕಟೀಲು – ಬಿ.ಸಿ ರೋಡು – ತೊಕ್ಕೊಟ್ಟು ಚತುಷ್ಪದ ರಸ್ತೆ ಕಾಮಗಾರಿಯನ್ನು ಮಾಡುತ್ತೇವೆ ಎಂದು  ಚಾಲನೆ, ಶಂಕುಸ್ಥಾಪನೆ ಎಂಬ ಹೆಸರಿನಲ್ಲಿ ಹೆದ್ದಾರಿ ಸಚಿವರನ್ನು ಮಂಗಳೂರಿಗೆ ಕರೆಸಿ ಮೂರು ಸಲ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ಅನ್ವರ್ ಸಾದತ್ ಟೀಕಿಸಿದರು.

- Advertisement -

ಬಂಟ್ವಾಳ – ಕೊಟ್ಟಿಗೆಹಾರ ಮತ್ತು ಬಿ.ಸಿ ರೋಡ್ – ಗುಂಡ್ಯ ರಸ್ತೆಯ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಿ ನಾಲ್ಕೈದು ವರ್ಷಗಳೇ ಕಳೆದಿವೆ. ಸರಕಾರವು ಸೂಕ್ತ ಸಮಯದಲ್ಲಿ ಗುತ್ತಿಗೆ ವಹಿಸಿದ ಕಂಪೆನಿಗಳಿಗೆ ಹಣ ಬಿಡುಗಡೆ ಮಾಡದ ಕಾರಣದಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಗುತ್ತಿಗೆ ಕಂಪೆನಿಗಳು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋದವು. ಇದೀಗ ಹೊಸ ಗುತ್ತಿಗೆ ಕಂಪೆನಿ ಕೆಲಸ ವಹಿಸಿಕೊಂಡು ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಆ ಹೆದ್ದಾರಿ ಕಾಮಗಾರಿಗೆ ಚಾಲನೆ ಎಂಬ ಹೆಸರಿನಲ್ಲಿ ಮಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಅಗತ್ಯತೆ ಏನಿತ್ತು, ಮಂಗಳೂರಿನ ಪಂಪ್ ವೆಲ್ ಫೈ ಓವರ್ ಕಾಮಗಾರಿಯನ್ನು ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿಸಿ ನಗೆ ಪಾಟಲಿಗೀಡಾದ ಸಂಸದರು, ಇಂದು ಚಾಲನೆ ಎಂಬ ಹೆಸರಿನಲ್ಲಿ ಜನರ ತಲೆಗೆ ಹುಳ ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಅನ್ವರ್ ಸಾದತ್ ವ್ಯಂಗವಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಬಂಟ್ವಾಳದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯಕ್ ಬಿ.ಸಿ ರೋಡ್ ನಗರವನ್ನು ಸೌಂದರೀಕರಣ ಮಾಡುತ್ತೇವೆ ಎಂದು ಎರಡೆರಡು ಬಾರಿ ಚಾಲನಾ ಕಾರ್ಯಕ್ರಮ ಮಾಡಿದ್ದರು. ಆದರೆ ಬಿ.ಸಿ ರೋಡಿನಲ್ಲಿ ಇಂದಿನ ವರೆಗೂ ಯಾವುದೇ ಕಾಮಗಾರಿ ಮಾಡದೇ ಪುಕ್ಕಟೆಯಾಗಿ ಪ್ರಚಾರಗಿಟ್ಟಿಸಿಕೊಂಡಿದ್ದಾರೆ. ಸುರತ್ಕಲ್ ಸಮೀಪದ ಎನ್ ಐಟಿಕೆಯ ಅನಧಿಕೃತ ಟೋಲ್ ಗೆಟ್ ಬಗ್ಗೆ ಜನ ಸಾಮಾನ್ಯರು ಹೋರಾಟ ಮಾಡುತ್ತಿದ್ದರೂ ಸಂಸದರಿಗೆ ಮತ್ತು ಜಿಲ್ಲೆಯ ಶಾಸಕರು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೌನವಹಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕೂಡಲೇ ಅದನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದ ಸಂಸದರು, ಇದೀಗ ಯೂಟರ್ನ್ ಹೊಡೆದು ನಾನು ಹಾಗೇ ಹೇಳಲೇ ಇಲ್ಲ ಎಂದು ಮಾಧ್ಯಮದ ಮುಂದೆ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ.

ಇದೀಗ ನಿತಿನ್ ಗಡ್ಕರಿಯ ಮುಂದೆ ಟೋಲ್ ಗೇಟ್ ಅನ್ನು ಬಂದ್ ಮಾಡಿಸುತ್ತೇವೆ, ಅದಕ್ಕಾಗಿ ನಿಯೋಗವನ್ನು ದೆಹಲಿಗೆ ಕರೆಸುತ್ತೇನೆ ಎಂದು ಅವಿವೇಕಿ ಹೇಳಿಕೆ ನೀಡುತ್ತಿದ್ದಾರೆ. ಒಂದು ಅನಧಿಕೃತ ಟೋಲ್ ಗೇಟ್ ಅನ್ನು ಮುಚ್ಚಿಸಲು ಸಾಧ್ಯವಿಲ್ಲದ ಸಂಸದರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಬುದ್ಧಿವಂತರು ಮತ್ತು ವಿದ್ಯಾವಂತರ ಜಿಲ್ಲೆಯೆಂಬ ಹೆಗ್ಗಳಿಕೆ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಭಾವನಾತ್ಮಕವಾಗಿ ವಿಭಜಿಸಿ ರಾಜಕೀಯ ಮಾಡುವ ಬಿಜೆಪಿ ನಾಯಕರು ಸರಕಾರಿ ಯೋಜನೆಗಳನ್ನು ಜಿಲ್ಲೆಗೆ ತರಲು ವಿಫಲರಾಗಿದ್ದಾರೆ. ಇತರೆ ಜಿಲ್ಲೆ, ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಗೆ ಅತೀ ಕಡಿಮೆ ಯೋಜನೆಗಳು ಬರುತ್ತಿವೆ. ಅದನ್ನೂ ಕೂಡ ಬಿಜೆಪಿ ಜನಪ್ರತಿನಿಧಿಗಳು ತನ್ನ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಂಡು ಅನಗತ್ಯ ಪ್ರಚಾರ ಮಾಡಿಕೊಂಡು ರಾಜಕೀಯ ಮಾಡುತ್ತಿರುವುದು ಜಿಲ್ಲೆಯ ಜನತೆಯ ದೌರ್ಬಾಗ್ಯ. ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಮಾಫಿಯಾದ ಅಟ್ಟಹಾಸ ಮಿತಿಮೀರುತ್ತಿದ್ದು ಇಲ್ಲೊಂದು ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಇದ್ದು ಅದರ ಬಗ್ಗೆ ಯಾವುದೇ ಜನ ಪ್ರತಿನಿಧಿಗಳು ಧ್ವನಿಯೆತ್ತುತ್ತಿಲ್ಲ. ಎಂ.ಆರ್ಪಿಎಲ್, ಒಎನ್ ಜಿಸಿ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮರೀಚಿಕೆಯಾಗಿದೆ. ಸುರತ್ಕಲ್ ನ ಬಹು ನಿರೀಕ್ಷಿತ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಅರ್ಧದಲ್ಲಿ ನಿಂತು ವರ್ಷಗಳೇ ಕಳೆದಿವೆ. ಅದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಮಂಗಳೂರು ಉತ್ತರ ಕ್ಷೇತ್ರದ ಶಾಸಕರು ಸುರತ್ಕಲ್ನ ವೃತ್ತ ಒಂದಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್  ಹೆಸರಿಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಅಪ್ರಬುದ್ದ ಜನಪ್ರತಿನಿಧಿಗಳಿಂದ ಜಿಲ್ಲೆಯ ಅಭಿವೃದ್ದಿಗೆ ತೊಡಕಾಗಿದೆ ಎಂದು ಅನ್ವರ್ ಸಾದತ್ ಬಜತ್ತೂರು  ಆರೋಪಿಸಿದ್ದಾರೆ.

Join Whatsapp