ನವದೆಹಲಿ: ರಾಷ್ಟ್ರಧ್ವಜ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೊಳಗಾಗಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೆಂಡಾಮಂಡಲವಾಗಿದ್ದು, ಬಿಜೆಪಿ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, ‘ಅವಹೇಳನ ಮತ್ತು ಪ್ರಚೋದನಾಕಾರಿ ಪದಬಳಕೆ ಮಾಡದಂತೆ ಈಶ್ವರಪ್ಪಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಶಾಲಾ ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಕಾಲೇಜಿನಲ್ಲಿನ ಧ್ವಜಸ್ತಂಭಕ್ಕೆ ಭಗವಾಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ತ್ರಿವರ್ಣ ಧ್ವಜದ ಭಗವಾಧ್ವಜವನ್ನು ಕೆಂಪುಕೋಟೆಯಲ್ಲಿ ಹಾರಿಸಲಾಗುವುದೆಂದು ಫೆಬ್ರವರಿ 9 ರಂದು ಹೇಳಿಕೆ ನೀಡಿದ್ದರು.
ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಬಿಜೆಪಿಗರು ರಾಷ್ಟ್ರೀಯವಾದಿಗಳು, ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸುತ್ತೇವೆ. ಬೇಜವಾಬ್ದಾರಿಯಿಂದ ಕೂಡಿದ ಸಚಿವರ ಹೇಳಿಕೆಯನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.