ಮಂಗಳೂರು: ನಗರದ ಪಚ್ಚನಾಡಿ ಕಾರ್ಪೊರೇಟರ್ ಮತ್ತು ಅವರ ಪತಿ ಸೇರಿಕೊಂಡು ಸರ್ಕಾರಿ ಜಾಗದಲ್ಲಿ ಅಕ್ರಮ ನಿವೇಶನ ನಿರ್ಮಾಣ ಮಾಡಲು ಸ್ಥಳ ಹಂಚುತ್ತಿದ್ದಾರೆ. ಇದರ ವಿರುದ್ಧ ತಕ್ಷಣ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಮೊಯ್ದಿನ್ ಬಾವ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಯ್ದಿನ್ ಬಾವಾ, ಪಚ್ಚನಾಡಿ ವಾರ್ಡ್ ನಲ್ಲಿ ಈಗಾಗಲೇ ನಗರ ಪಾಲಿಕೆಯ 60 ವಾರ್ಡ್’ಗಳ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದರಿಂದ ದುರ್ನಾತ ಬೀರುತ್ತಿದ್ದು, ಇದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ವಾಯು ಮಾಲಿನ್ಯ ಮತ್ತು ಸಾಂಕ್ರಾಮಿಕ ರೋಗಗಳು ಸ್ಥಳೀಯರು ತೊಂದರೆಗೊಳಗಾಗಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಕಾರ್ಪೋರೇಟರ್ ಸಂಗೀತ ಅವರ ನಿರ್ಲಕ್ಷ್ಯವೇ ಕಾರಣ. ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕಾದ ಕಾರ್ಪೊರೇಟರ್ ಅವರು ಬಡವರಿಗೆ ಹೆಸರಿನಲ್ಲಿ ಸರ್ಕಾರೀ ಜಾಗವನ್ನು ತಮ್ಮ ಹಿಂಬಾಲಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪಚ್ಚನಾಡಿ ಸರ್ವೆ ನಂ158 ಭಾಗ 2 ರಲ್ಲಿ 2.45 ಎಕರೆ ಸರ್ಕಾರಿ ಜಾಗವಿದ್ದು , ಈ ಸ್ಥಳವನ್ನು ಗ್ರೇಜಿಂಗ್ ಗ್ರೌಂಡ್ ಎಂದು ಕಂದಾಯ ಇಖಾಖೆಯಲ್ಲಿ ನೋಂದಣೆಗೊಂಡಿದೆ. ಆದರೆ ಕಾರ್ಪೋರೇಟರ್ ಸಂಗೀತಾ ಮತ್ತು ಅವರ ಪತಿ ಸೇರಿಕೊಂಡು ಆ ಜಾಗವನ್ನು ಮತ್ತ್ಯಾರಿಗೂ ಹಂಚಿಕೆ ಮಾಡುತ್ತಿದ್ದಾರೆ. ಪ್ರಶ್ನಿಸಿದ ಸ್ಥಳೀಯರಿಗೂ ಬೆದರಿಕೆಯೊಡ್ಡಿದ್ದಾರೆ. ಆ ವೀಡಿಯೋ ಇದೀಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಬ್ಬ ಶಾಸಕನಿಗಾಗಲೀ ಅಥವಾ ಮಂತ್ರಿಗಾಗಲೀ ಹೀಗೆ ತಮಗೆ ಬೇಕಾದವರಿಗೆ ಜಾಗವನ್ನು ಹಂಚುವ ಅಧಿಕಾರವಿಲ್ಲ. ಹೀಗಿರುವಾಗ ಸಂಗೀತಾ ಅವರು ಹೇಗೆ ಭೂಮಿ ಹಂಚುತ್ತಿದ್ದಾರೆ ಎಂದು ಮೊಯ್ದಿನ್ ಬಾವಾ ಪ್ರಶ್ನಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಸರ್ಕಾರಿ ಅಧಿಕಾರಿಗಳು ಇದನ್ನು ಸರ್ಕಾರಿ ಜಾಗವೆಂದು ಘೋಷಿಸಿದ್ದಾರೆ. ಸ್ಥಳೀಯರು ಕಾರ್ಪೋರೇಟರ್ ಅವರ ಪತಿಯ ದಬ್ಬಾಳಿಕೆ ವಿರುದ್ಧ ಪ್ರತಿಭಟಿಸಿದ್ದಾರೆ. ನಾನು ಕೂಡಾ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿದ್ದೇನೆ ಎಂದು ಹೇಳಿದರು.