ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಸೋಲು!

Prasthutha|

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಚುನಾವಣಾ ಆಯೋಗ ಅಂತಿಮವಾಗಿ ಪ್ರಕಟಿಸಿದ್ದು, 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು ಎಂದು ಘೋಷಿಸಿದೆ.

- Advertisement -

ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿಗೆ 57,797 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ 57,781 ಮತಗಳು ಎಂದು ಚುನಾವಣಾಧಿಕಾರಿಗಳಿಂದ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ನಡುರಾತ್ರಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 116 ಮತಗಳಿಂದ ಗೆದ್ದುಬೀಗಿದ್ದರು. ಆ ನಂತರ ಮರು ಎಣಿಕೆಗೆ ಬಿಜೆಪಿ ಅಭ್ಯರ್ಥಿ ಮನವಿ ಮಾಡಿದ್ದರು.

- Advertisement -

ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಎಂದು ಅಂತಿಮವಾಗಿ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಮೊದಲ ಬಾರಿ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ ಕೇಂದ್ರದ ಬಳಿ ಕಣ್ಣೀರು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಇಂದು ಭಾನುವಾರವೇ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಸೌಮ್ಯಾರೆಡ್ಡಿ ಘೋಷಿಸಿದ್ದಾರೆ.

ಮೊದಲ ಬಾರಿ ಮತ ಎಣಿಕೆಯಲ್ಲಿ ನನಗೆ ಗೆಲುವಾಗಿತ್ತು. ತೇಜಸ್ವಿ‌ ಸೂರ್ಯ, ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಎಂಟ್ರಿ ಕೊಟ್ಟಿದ್ದರು. ಅಕ್ರಮವಾಗಿ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಜಯನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ಜಯನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಒಟ್ಟು 2,09,942 ಮತದಾರರು ಇದ್ದರು. 105582 ಮಂದಿ ಪುರುಷರು, 1,04,345 ಮಹಿಳೆಯರು ಇದ್ದಾರೆ. ಕಣದಲ್ಲಿ 15 ಮಂದಿ ಅಭ್ಯರ್ಥಿಗಳು ಇದ್ದರು. ಶೇ. 53.72ರಷ್ಟು ಮತದಾನವಾಗಿತ್ತು.

Join Whatsapp