ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Prasthutha|

ರಾಂಚಿ : ತಮ್ಮ ಸರಕಾರಗಳ ವಿರುದ್ಧ ಮಾತನಾಡಿದವರ ವಿರುದ್ಧ ‘ದೇಶದ್ರೋಹ’ ಆರೋಪವನ್ನು ಹೊರಿಸುತ್ತಿದ್ದ ಬಿಜೆಪಿಗರು ಈಗ ಸ್ವತಃ ದೇಶದ್ರೋಹ ಪ್ರಕರಣ ಎದುರಿಸುವಂತಾಗಿದೆ. ಜಾರ್ಖಂಡ್ ಬಿಜೆಪಿ ಅಧ್ಯಕ್ಷ ದೀಪಕ್ ಪ್ರಕಾಶ್ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.  

- Advertisement -

ಜಾರ್ಖಂಡ್ ನ ಜೆಎಂಎಂ ನೇತೃತ್ವದ ಸರಕಾರವನ್ನು ಎರಡು ತಿಂಗಳೊಳಗೆ ಉರುಳಿಸುವುದಾಗಿ ಮತ್ತು ರಾಜ್ಯಕ್ಕೆ ಬಿಜೆಪಿಯ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ಪ್ರಕಾಶ್ ಹೇಳಿದ್ದರು. ಮುಂಬರುವ ದುಮ್ಕಾ ಮತ್ತು ಬೆರ್ಮೊ ಉಪಚುಣಾವಣೆಗಳಲ್ಲಿ ಆಡಳಿತಾರೂಢ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡದಂತೆ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ದುಮ್ಕಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ಯಾಮಲ್ ಕುಮಾರ್ ಸಿಂಗ್, ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಮತ್ತು ಸರಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ಪ್ರಕಾರ, ಪ್ರಕಾಶ್ ವಿರುದ್ಧ ಐಪಿಸಿ ಕಲಂ 124ಎ (ದೇಶದ್ರೋಹ), 504 (ಶಾಂತಿ ಕದಡುವುದಕ್ಕೆ ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಲಾದ ಉದ್ದೇಶಪೂರ್ವಕ ಅವಮಾನ), 506 (ಅಪರಾಧಿಕ ಹೇಳಿಕೆ) ಮತ್ತು 120(ಬಿ) (ಅಪರಾಧ ಸಂಚು) ಮುಂತಾದ ಆರೋಪಗಳಡಿ ಪ್ರಕರಣ ದಾಖಲಾಗಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸುವ ರಾಜ್ಯಸಭಾ ಸದಸ್ಯರೂ ಆಗಿರುವ ಪ್ರಕಾಶ್, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ, ತಾಕತ್ತಿದ್ದರೆ ಸರಕಾರ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.  

ಬಿಜೆಪಿಗರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಇತರ ರಾಜ್ಯಗಳಲ್ಲಿ ಮಾಡಿದಂತೆ, ಕುದುರೆ ವ್ಯಾಪಾರ ಮೂಲಕ, ರಾಜಕೀಯವನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲು ಅವರು ಹೊರಟಿದ್ದಾರೆ.. ಪ್ರಕಾಶ್ ಹೇಳಿಕೆಯಿಂದ, ಅವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅವರು ಸರಕಾರವನ್ನು ಉರುಳಿಸಲು ಯೋಜನೆ ರೂಪಿಸಿದ್ದಾರೆಂದರೆ, ಅವರ ವಿರುದ್ಧದ ಈ ಎಫ್ ಐಆರ್, ಅವರ ಕೆಟ್ಟ ಸಂಚನ್ನು ಬಯಲಿಗೆಳೆಯಲು ಪ್ರಬಲವಾದ ಅಸ್ತ್ರವಾಗಿದೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.    



Join Whatsapp