ಬೆಂಗಳೂರು: ಮಹಿಳೆಯರ ಬದುಕನ್ನು ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂದ ಸಚಿವ ಕೆ.ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಸುಧಾಕರ್ ಅವರೇ, ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರ ಬಗ್ಗೆಯೂ ಹೀಗೆ ಹೇಳುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದೆ.
ಸುಧಾಕರ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಿಳೆಯರ ಬದುಕನ್ನು ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದಿದೆ.
ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಆಡಿದ ಮಾತು ಮಹಿಳಾ ಸ್ವಾತಂತ್ರವನ್ನು ಅಣಕಿಸುವಂತಿದೆ, ಸಚಿವ ಸುಧಾಕರ್ ಅವರೇ, ಮಹಿಳೆಯರ ಬದುಕಿನ ಆಯ್ಕೆಯನ್ನು ನಿರ್ಧರಿಸಲು ನೀವು ಯಾರು? ಪುರುಷ ಯಜಮಾನಿಕೆಯನ್ನು ಮುಂದುವರೆಸುವ ಹವಣಿಕೆ ನಿಮಗೇಕೆ? ಮನುವಾದವನ್ನು ನಂಬಿದ ಬಿಜೆಪಿಯ ಮಹಿಳಾ ವಿರೋಧಿ ಕುತಂತ್ರಗಳು ಅವರ ಮಾತುಗಳಲ್ಲಿಯೇ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.