ಬಿಟ್ ಕಾಯಿನ್ ದಾಖಲೆ ಸೂಕ್ತ ಸಮಯದಲ್ಲಿ ಬಿಡುಗಡೆ : ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ‘ಬಿಟ್ ಕಾಯಿನ್ ಪ್ರಕರಣ ಸಂಬಂಧ 100 ಪರ್ಸೆಂಟ್ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ. ನಾವು ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರಕಾರದ ಮಂತ್ರಿಗಳು, ಅಧಿಕಾರಿಗಳೇ ನಮಗೆ ಅದನ್ನು ಒದಗಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

- Advertisement -


ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದ್ದರೂ ಬಿಜೆಪಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿದ ಅವರು, ‘ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಸಾಕಷ್ಟು ಮಾತನಾಡಿದ್ದು, ನಿನ್ನೆ ಕುಮಾರಸ್ವಾಮಿ ಅವರು ಕೂಡ ಹೇಳಿದ್ದಾರೆ. ಸರ್ಕಾರ ಪ್ರಕರಣದ ವಿಚಾರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಅವರಿಗೆ ಅನುಕೂಲವಾಗುವ ಅಂಶಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಎಂದರು.


ಪ್ರಧಾನಮಂತ್ರಿಗಳಿಗೆ ಬರೆಯಲಾಗಿರುವ ಪತ್ರದ ಬಗ್ಗೆ ಅವರು ಯಾಕೆ ಮಾತನಾಡುತ್ತಿಲ್ಲ? ಅದು ನಿಜನಾ, ಸುಳ್ಳಾ? ಈ ಬಗ್ಗೆ ತನಿಖೆ ನಡೆಯುತ್ತಿದ್ದು ಅದು ಏನಾಗಿದೆ ಎಂದು ಹೇಳುತ್ತಿಲ್ಲ. ಬಿಟ್ ಕಾಯಿನ್ ವ್ಯವಹಾರ ನಡೆಸುವವರ ಬಗ್ಗೆ ಯಾವುದೇ ತಕರಾರಿಲ್ಲ. ಈ ಪ್ರಕರಣದಲ್ಲಿ ಹ್ಯಾಕಿಂಗ್ ನಡೆದಿದೆಯಾ ಇಲ್ಲವಾ? ಎಂಬುದಷ್ಟೇ ಮುಖ್ಯ. ಈ ಎಲ್ಲ ಪ್ರಶ್ನೆಗಳಿಗೂ ಒಂದೊಂದು ರೀತಿಯ ಸ್ಟೋರಿಗಳು ಬರುತ್ತಿವೆ. ಮಾಧ್ಯಮಗಳು ವರದಿ ಮಾಡುತ್ತಿವೆ. ಹೀಗಾಗಿ ಈ ಪ್ರಕರಣದಲ್ಲಿ ಏನಾಗಿದೆ ಎಂಬ ಸತ್ಯಾಂಶವನ್ನು ಸರ್ಕಾರ ಜನರ ಮುಂದೆ ಇಡಬೇಕು. ಸರ್ಕಾರಕ್ಕೇ ಈ ವಿಚಾರವಾಗಿ ಗೊಂದಲವಿದೆ’ ಎಂದೂ ಹೇಳಿದರು.

- Advertisement -


ಪ್ರಧಾನಿಗಳೇ ಮುಖ್ಯಮಂತ್ರಿಗಳಿಗೆ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಧಾನಮಂತ್ರಿಗಳು ಬಿಟ್ಟುಬಿಡಿ ಎಂದ ಮಾತ್ರಕ್ಕೆ ನಾವ್ಯಾಕೆ ಬಿಟ್ಟುಬಿಡಬೇಕು? ಜನರ ವಿಚಾರ ಇದು. ದೇಶದಲ್ಲಿ ಅವ್ಯವಹಾರ ಯಾರೇ ಮಾಡಿದರೂ ತಪ್ಪೇ. ಅದು ಕಾಂಗ್ರೆಸ್ ಅವರಾಗಲಿ, ಬೇರೆ ಪಕ್ಷದವರಾಗಲಿ, ಜನರೇ ಆಗಲಿ. ಅದರ ಸತ್ಯಾಂಶ ಏನು ಎಂಬುದು ತಿಳಿಯಬೇಕು. ಪೊಲೀಸರು ಮಾಡಿದ ತನಿಖೆಯನ್ನು ಈಗ ಇ.ಡಿ.ಗೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು, ಐದು, ಹತ್ತು, ಸಾವಿರ ಕಾಯಿನ್ ಅವ್ಯವಹಾರ ಆಗಿದೆಯೋ. ಆ ಸತ್ಯಾಂಶವನ್ನು ಹೊರಗಿಡಬೇಕು ಅಷ್ಟೇ’ ಎಂದು ಉತ್ತರಿಸಿದರು.


‘ಇವತ್ತಿನಿಂದ ಪದ್ಮನಾಭನಗರಕ್ಕೆ ಬೆಳಕು ಪ್ರಾರಂಭವಾಗುತ್ತಿದೆ. ಇಲ್ಲಷ್ಟೇ ಅಲ್ಲದೇ ಬಸವನಗುಡಿ ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರನ್ನು ತರುವುದೇ ಇಂದಿನಿಂದ ನಿಮ್ಮೆಲ್ಲರ ಗುರಿ. ಇಂದು ಪದ್ಮನಾಭನಗರ ಕಚೇರಿ ಉದ್ಘಾಟನೆ ಮಾಡಿದ್ದು, ಈ ಕಚೇರಿ ನಿರ್ಮಾಣಕ್ಕೆ ಸಹಕರಿಸಿದ ರಘುನಾಥ ನಾಯ್ಡು ಅವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅವರು ಟಿಕೆಟ್ ನೀಡಿ ಎಂದು ಕೇಳಿಲ್ಲ. ಪಕ್ಷದ ಸಂಘಟನೆಗಾಗಿ ನೀವು ಹೇಳಿದ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಕಚೇರಿಯನ್ನು ಕಾರ್ಯಕರ್ತರಿಗಾಗಿ ಮಾಡಲಾಗಿದೆ.

ನೀವು ಮನೆ ಮನೆಗೂ ಹೋಗಿ ಮತದಾರರನ್ನು ಸಂಪರ್ಕಿಸಿ ಮತದಾರರ ಪಟ್ಟಿ ಸಿದ್ಧಪಡಿಸಿ, ಪಕ್ಷ ಸಂಘಟನೆ ಮಾಡಲು ಈ ಕಚೇರಿ ನಿರ್ಮಾಣ ಮಾಡಲಾಗಿದೆ ಎಂದರು. ಇದು ನಮ್ಮ ಪಾಲಿಗೆ ದೇವಸ್ಥಾನ ಇದ್ದಂತೆ. ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದ ಜನ ಬಳಸಿಕೊಳ್ಳಬಹುದು. ನೀವೆಲ್ಲಾ ಸೇರಿ ಕೆಲಸ ಮಾಡಿ. ಇಲ್ಲಿ ಯಾವುದೇ ಗುಂಪು ಇಲ್ಲ. ಇರೋದು ಒಂದೇ ಗುಂಪು. ಅದು ಕಾಂಗ್ರೆಸ್ ಗುಂಪು. ನಾವು ಬಾವುಟ ಕಟ್ಟಿರುವುದನ್ನು ಸಾಮ್ರಾಟ್ ಅಶೋಕ್ ಅವರು ಅಧಿಕಾರಿಗಳಿಗೆ ಹೇಳಿ ಕಿತ್ತು ಹಾಕಿಸುತ್ತಿದ್ದಾರೆ. ಅವರು ಬಾವುಟ ಕಿತ್ತು ಹಾಕುವಂತಾದರೂ ನಾವು ಮಾಡಿದ್ದೇವೆ.


ಇದೇ 14 ರಂದು ಜವಾಹರಲಾಲ್ ನೆಹರು ಅವರ ಜನ್ಮದಿನ, ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗುತ್ತಿದೆ. 12 ವರ್ಷಗಳ ನಂತರ ಈ ಅಭಿಯಾನ ಮಾಡುತ್ತಿದ್ದು, ಬಸವನಗುಡಿ ಕ್ಷೇತ್ರದಿಂದ ಕನಿಷ್ಠ 25 ಸಾವಿರ ಸದಸ್ಯರನ್ನು ಮಾಡುವ ಗುರಿ ನಿಮ್ಮದಾಗಬೇಕು.


ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತೇವೆ. ನಾವು ಪದ್ಮನಾಭನಗರ ಹಾದಿಯಾಗಿ ನಗರದ ನಾನಾ ಕಡೆ ಪಾದಯಾತ್ರೆ ಮಾಡಲಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಬೇಕು. ಈ ಯೋಜನೆ ಜಾರಿಯಾಗಿ ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರು ಸಿಗಬೇಕು. ತಮಿಳುನಾಡಿಗೆ ಕೊಡಬೇಕಾದ ನೀರು ಸರಿಯಾಗಿ ಕೊಟ್ಟು ಉಳಿದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಈ ಯೋಜನೆಗೆ ಆಗ್ರಹಿಸೋಣ, ಹೋರಾಟ ಮಾಡೋಣ. ನೀವು ಇದಕ್ಕೆ ಸಹಕಾರ ನೀಡಬೇಕು, ಬೆಂಗಳೂರು ಗೌರವ ಕಾಪಾಡಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ನಿಮ್ಮ ಹಸ್ತ, ನಿಮ್ಮ ಹೋರಾಟ. ನಿಮ್ಮ ಸಂಕಲ್ಪ ಕಾಂಗ್ರೆಸ್ ಪಕ್ಷದ ಪರವಾಗಿರಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Join Whatsapp